ಟ್ರ್ಯಾಕ್ಟರ್ ಅವಘಡ: ಗಂಗಾಸ್ನಾನಕ್ಕೆ ತೆರಳುತ್ತಿದ್ದ 24 ಜನ ಸಾವು ಲಖನೌ: ಟ್ರ್ಯಾಕ್ಟರ್‌ ಟ್ರಾಲಿ ಮಗುಚಿ ಕೊಳಕ್ಕೆ ಬಿದ್ದು, ಗಂಗಾ ನದಿಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದವರಲ್ಲಿ ಎಂಟು ಮಕ್ಕಳು ಸೇರಿ 24 ಜನರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಕಾಸ್‌ಗಂಜ್‌ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಈ ಅವಢಗ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲರೂ ಏಟ ಜಿಲ್ಲೆಯ ಜೈಥರಾ ಜಿಲ್ಲೆಯಿಂದ ಗಂಗಾ ಸ್ನಾನಕ್ಕೆ ಹೋಗುತ್ತಿದ್ದರು. ಪಟಿಯಾಲಿ ಪ್ರದೇಶದಲ್ಲಿ ಪಟಿಯಾಲಿ– ದರಿಯಾಗಂಜ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ 15ರಿಂದ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಎಂಟು ಮಕ್ಕಳು ಇದ್ದಾರೆ ಎಂದು ಅಲಿಗಢ ವ್ಯಾಪ್ತಿಯ ಐಜಿ ಶಲಭ್‌ ಮಾಥುರ್‌ ತಿಳಿಸಿದ್ದಾರೆ. ವಾಹನ ಹಿಂದಿಕ್ಕಲು ಚಾಲಕ ಪ್ರಯತ್ನಿಸಿದಾಗ ಟ್ರ್ಯಾಕ್ಟರ್‌ ನಿಯಂತ್ರಣ ಕಳೆದುಕೊಂಡು ಟ್ರ್ಯಾಲಿ ಮುಗುಚಿ 7ರಿಂದ 8 ಅಡಿ ಆಳದ ಕೊಳಕ್ಕೆ ಬಿದ್ದಿದೆ. ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಮತ್ತು ಗಾಯಾಳುಗಳ ಕುಟುಂಬಗಳಿಗೆ ತಲಾ ₹50 ಸಾವಿರ ಹಣಕಾಸು ನೆರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಘೋಷಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಾಸ್‌ಗಂಜ್‌ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಸಂಭವಿಸಿದ ಜೀವ ಹಾನಿಯು ಅತ್ಯಂತ ಹೃದಯ ವಿದ್ರಾವಕವಾದುದು. ಎಲ್ಲ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮತ್ತು ಮೃತರ ಕುಟಂಬಗಳಿಗೆ ತಕ್ಷಣದ ನೆರವು ನೀಡಲು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಯೋಗಿ ಆದಿತ್ಯನಾಥ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಇದೊಂದು ಅತ್ಯಂತ ದುಃಖಕರ ಮತ್ತು ಹೃದಯವಿದ್ರಾವಕ ಘಟನೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ತ್ವರಿತಗೊಳಿಸುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಘಟನೆಯ ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ಮತ್ತು ಪರಿಹಾರ ಒದಗಿಸಲು ಪಕ್ಷದ ಕಾರ್ಯಕರ್ತರಿಗೂ ವಿನಂತಿಸಲಾಗಿದೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.