ಉತ್ತರಪ್ರದೇಶ ಅಭಿವೃದ್ಧಿ ಸಾಧಿಸುತ್ತದೆ ಎಂದು ಯಾರೂ ಭಾವಿಸಿರಲಿಲ್ಲ: ಪ್ರಧಾನಿ ಮೋದಿ ಲಖನೌ: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ 'ಡಬಲ್‌ ಎಂಜಿನ್' ಸರ್ಕಾರದ ಏಳು ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶ ಸಾಕಷ್ಟು ಬದಲಾಗಿದೆ. ಆದರೆ, ರಾಜ್ಯವು ಅಭಿವೃದ್ಧಿ ಸಾಧಿಸಲಿದೆ ಎಂಬುದನ್ನು ಕೆಲವು ವರ್ಷಗಳ ಹಿಂದೆ ಯಾರೂ ಅಂದಾಜಿಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ₹ 10 ಲಕ್ಷ ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ, ರಾಜ್ಯದಲ್ಲಿ ಹೂಡಿಕೆಗೆ ತಡೆಯೊಡ್ಡುವ 'ಕೆಂಪು ಪಟ್ಟಿ' ಸಂಸ್ಕೃತಿಯು, ಹೂಡಿಕೆಗೆ ಉತ್ತೇಜನ ನೀಡುವ 'ಕೆಂಪು ಹಾಸು' ಸಂಸ್ಕೃತಿಯಾಗಿ ಬದಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಉತ್ತರ ಪ್ರದೇಶದಲ್ಲಿ ಇಷ್ಟು ಪ್ರಮಾಣದ ಹೂಡಿಕೆ ಮತ್ತು ಉದ್ಯೋಗದ ವಾತಾವರಣ ಸೃಷ್ಟಿಯಾಗಲಿದೆ ಎಂದು 7–8 ವರ್ಷಗಳ ಹಿಂದೆ ಯಾರೂ ಅಂದಾಜಿಸಿರಲಿಲ್ಲ. ಅಪರಾಧ ಮತ್ತು ಗಲಭೆಗಳು ಸಾಮಾನ್ಯವಾಗಿದ್ದ ಉತ್ತರ ಪ್ರದೇಶವು ಈ ರೀತಿ ಅಭಿವೃದ್ಧಿ ಹೊಂದಲಿದೆ ಎಂಬುದನ್ನು ಯಾರೊಬ್ಬರೂ ನಂಬಿರಲಿಲ್ಲ' ಎಂದಿದ್ದಾರೆ. 'ಉತ್ತರ ಪ್ರದೇಶದಲ್ಲಿ 'ಡಬಲ್‌ ಎಂಜಿನ್‌' ಸರ್ಕಾರ ರಚನೆಯಾಗಿ ಏಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ರಾಜ್ಯ ಸರ್ಕಾರವು 'ಕೆಂಪು ಪಟ್ಟಿ' ಸಂಸ್ಕೃತಿಯನ್ನು ತೊಡೆದುಹಾಕಿ, 'ಕೆಂಪು ಹಾಸು' ಸಂಸ್ಕೃತಿ ಅಳವಡಿಸಿಕೊಂಡಿದೆ. ಕಳೆದ ಏಳು ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಕುಸಿದು, ಉದ್ಯಮ ಸಂಸ್ಕೃತಿ ವಿಸ್ತರಣೆಗೊಂಡಿದೆ. ವ್ಯಾಪಾರ, ಅಭಿವೃದ್ಧಿಗೆ ಪೂರಕ ವಾತಾವರಣ ಮತ್ತು ವಿಶ್ವಾಸ ವೃದ್ಧಿಯಾಗಿದೆ' ಎಂದು ಆಭಿಪ್ರಾಯಪಟ್ಟಿದ್ದಾರೆ. ಮನೋಬಲವಿದ್ದರೆ, ಅಭಿವೃದ್ಧಿ ಕಾರ್ಯಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಬಿಜೆಪಿಯ 'ಡಬಲ್‌ ಎಂಜಿನ್‌' ಸರ್ಕಾರ ತೋರಿಸಿಕೊಟ್ಟಿದೆ ಎಂದಿರುವ ಅವರು, ಉತ್ತರ ಪ್ರದೇಶದ ರಫ್ತು ಸಾಮರ್ಥ್ಯ ಕಳೆದ ಕೆಲ ವರ್ಷಗಳಲ್ಲಿ ದ್ವಿಗುಣಗೊಂಡಿದೆ. ವಿದ್ಯುತ್‌ ಉತ್ಪಾದನೆ ಹಾಗೂ ವಿತರಣೆಯಲ್ಲಿ ಪ್ರಶಂಸನೀಯ ಸಾಧನೆ ಮಾಡಿದೆ. ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಎಕ್ಸ್‌ಪ್ರೆಸ್‌ ರಸ್ತೆಗಳು ಉತ್ತರ ಪ್ರದೇಶದಲ್ಲಿ ಇವೆ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.