ಒಡಿಶಾ: ಪೋಸ್ಟರ್‌ ಅಳವಡಿಸಿ ಕಾಂಗ್ರೆಸ್‌ ಶಾಸಕನಿಗೆ ಜೀವ ಬೆದರಿಕೆ ಭುವನೇಶ್ವರ: ಒಡಿಶಾದ ಬೋಲಂಗಿರ್ ಜಿಲ್ಲೆಯ ಕಾಂತಾಬಾಂಜಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಂತೋಷ್ ಸಿಂಗ್ ಸಲೂಜಾ ಅವರನ್ನು 15 ದಿನಗಳಲ್ಲಿ ಕೊಲ್ಲಲಾಗುವುದು ಎಂದು ಬ್ಯಾನರ್‌ ಅಳವಡಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಪೋಸ್ಟರ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಸಲೂಜಾ, 'ರಾಜಕೀಯ ಕಾರಣಗಳಿಗಾಗಿ ಜೀವ ಬೆದರಿಕೆ ಹಾಕಲಾಗಿದೆ. ಕೆಲವು ಮಾಧ್ಯಮಗಳಿಂದ ಘಟನೆಯ ಬಗ್ಗೆ ನನಗೆ ತಿಳಿದು ಬಂದಿದೆ. ಚುನಾವಣೆ ಸಮೀಪಿಸುತ್ತಿರುವಂತೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ, ಈ ಸಮಯದಲ್ಲಿ ಯಾರೋ ಪೋಸ್ಟರ್ ಹಾಕುವ ಮೂಲಕ ನನ್ನನ್ನು ಕೊಲ್ಲುವುದಾಗಿ ನೇರವಾಗಿ ಸವಾಲು ಹಾಕುತ್ತಿದ್ದಾರೆ. ಇದು ಆಘಾತಕಾರಿಯಾಗಿದೆ’ ಎಂದಿದ್ದಾರೆ. ‘ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸಾಯಲು ಹೆದರುವುದಿಲ್ಲ. ಜೀವ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು’ ಎಂದು ಕಾಂಗ್ರೆಸ್ ಮುಖಂಡರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.