ಸೀಟು ಹಂಚಿಕೆ ಅಂತಿಮಗೊಳ್ಳುವವರೆಗೆ ಕಾಂಗ್ರೆಸ್ ಯಾತ್ರೆಯಲ್ಲಿ ಭಾಗವಹಿಸಲ್ಲ:ಅಖಿಲೇಶ್ ಲಖನೌ: ‘ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ಗೆ 17 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಇದಕ್ಕೆ ಒಪ್ಪಿದರಷ್ಟೆ ರಾಯ್‌ಬರೇಲಿಯಲ್ಲಿ ನಡೆಯಲಿರುವ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಭಾಗವಹಿಸುತ್ತಾರೆ’ ಎಂದು ಸಮಾಜವಾದಿ ಪಕ್ಷ ಸೋಮವಾರ ತಿಳಿಸಿದೆ. ‘ಕಾಂಗ್ರೆಸ್‌ಗೆ ಕೊನೆಯ ಅವಕಾಶವನ್ನು ನೀಡುತ್ತಿದ್ದೇವೆ. ಅಖಿಲೇಶ್‌ ಯಾದವ್‌ ಅವರು ಯಾತ್ರೆಯಲ್ಲಿ ಭಾಗಿಯಾಗುವುದು ಕಾಂಗ್ರೆಸ್‌ನ ಒಪ್ಪಿಗೆಯ ಮೇಲೆ ನಿರ್ಧರಿತವಾಗಲಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದರು. ಸೋಮವಾರ ಅಮೇಥಿಯಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆಯು ಸಾಗಿದ್ದು, ಮಂಗಳವಾರ ರಾಯ್‌ಬರೇಲಿಯನ್ನು ತಲುಪಲಿದೆ. ಯಾತ್ರೆಯಲ್ಲಿ ಭಾಗಿಯಾಗುವುದಾಗಿ ಈ ಹಿಂದೆ ಅಖಿಲೇಶ್‌ ಯಾದವ್‌ ತಿಳಿಸಿದ್ದರು. ಇದೀಗ ಸೀಟು ಹಂಚಿಕೆ ತೀರ್ಮಾನವಾದರೆ ಮಾತ್ರ ಯಾತ್ರೆಯಲ್ಲಿ ಭಾಗಿಯಾಗುವುದಾಗಿ ಷರತ್ತು ವಿಧಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷವು ಆರಂಭದಲ್ಲಿ ಕಾಂಗ್ರೆಸ್‌ಗೆ 11 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ತಿಳಿಸಿತ್ತು. ಆದರೆ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ನೀಡುವಂತೆ ಪಟ್ಟುಹಿಡಿದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.