ಗೃಹ ವಿಜ್ಞಾನ ಪಿ.ಜಿ. ಪದವೀಧರರು ಉಪನ್ಯಾಸಕ ಹುದ್ದೆಗೆ ಅರ್ಹರು: ಸುಪ್ರೀಂಕೋರ್ಟ್ ನವದೆಹಲಿ: ಗೃಹ ವಿಜ್ಞಾನದ 18 ಉಪನ್ಯಾಸಕ ಹುದ್ದೆಗಳ ನೇಮಕಾತಿಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ಅನೂರ್ಜಿತಗೊಳಿಸಿದೆ. ನೇಮಕಾತಿಯ ಅಧಿಸೂಚನೆಯಲ್ಲಿ ಯಾವುದೇ ವಿಷಯದ ಪರಿಣತಿಯನ್ನು ಉಲ್ಲೇಖಿಸಿಲ್ಲ ಎಂಬ ವಿಷಯವನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಅರವಿಂದ ಕುಮಾರ್ ಅವರ ದ್ವಿಸದಸ್ಯ ಪೀಠ, ‘ಗೃಹ ವಿಜ್ಞಾನ ಎಂಬುದು ಪದವಿ ಶಿಕ್ಷಣಕ್ಕೆ ಯುಜಿಸಿ ಮಾನ್ಯತೆ ನೀಡಿರುವ ವಿಷಯವಾಗಿದೆ. ಆದ್ದರಿಂದ, ಇದಕ್ಕೆ ಸಂಬಂಧಿಸಿದ ಯಾವುದೇ ಸ್ನಾತಕೋತ್ತರ ಪದವಿ ಹೊಂದಿರುವವರು ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ’ ಎಂದು ಸ್ಪಷ್ಟಪಡಿಸಿತು. ’ಪದವಿ ಶಿಕ್ಷಣಕ್ಕೆ ಗೃಹ ವಿಜ್ಞಾನವು ಒಂದು ವಿಷಯವಾಗಿದೆ. 2023ರ ಡಿಸೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಾಗಿ (ಎನ್‌ಇಟಿ) ಬಿಡುಗಡೆಗೊಂಡ ಮಾಹಿತಿ ಕೈಪಿಡಿಯಲ್ಲಿ ಯುಜಿಸಿ ವಿಷಯ ಸಂಖ್ಯೆ 12ರಲ್ಲಿ ಗೃಹ ವಿಜ್ಞಾನವನ್ನು ಒಂದು ವಿಷಯವನ್ನಾಗಿ ಪರಿಗಣಿಸಲಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ನಿರ್ದಿಷ್ಟಪಡಿಸಿರುವ ವಿದ್ಯಾರ್ಹತೆಯು ಕೇವಲ ಗೃಹ ವಿಜ್ಞಾನದ ವಿಷಯದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ನಾವು ಪುನರುಚ್ಚರಿಸುತ್ತಿದ್ದೇವೆ, ಗೃಹ ವಿಜ್ಞಾನದ ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪದವಿ ಪಡೆದಿದ್ದೇವೆ ಎಂಬುದು ಮುಖ್ಯವಾಗುವುದಿಲ್ಲ’ ಎಂದಿತು. ‘ಇಂದಿನವರೆಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳು ನಡೆಸುವ ಗೃಹ ವಿಜ್ಞಾನದ ಪದವಿಗಳ ಉಪನ್ಯಾಸಕರನ್ನು ಒಂದೇ ಶ್ರೇಣಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅದೇ ಆಧಾರದಲ್ಲಿ ಜಾಹೀರಾತನ್ನು ಪ್ರಕಟಿಸಲಾಗಿದೆ’ ಎಂದು ಪೀಠ ಹೇಳಿತು. ’ಈ ವಿಷಯದಲ್ಲಿ ಹೈಕೋರ್ಟ್ ಅಳವಡಿಸಿರುವ ತಾರ್ಕಿಕತೆಯನ್ನು ಅನುಸರಿಸಿದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ ವಿಷಯಗಳ ಸಂಪೂರ್ಣ ಅಧಿಸೂಚನೆಯೇ ದೋಷಪೂರಿತವಾಗುತ್ತದೆ. ಏಕೆಂದರೆ, ಇವುಗಳಲ್ಲಿ ಕೂಡಾ ವಿಷಯದ ನಿರ್ದಿಷ್ಟತೆಯನ್ನು ಉಲ್ಲೇಖಿಸಲಾಗಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2007ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ನೇಮಕಾತಿ ಪ್ರಕ್ರಿಯೆಯನ್ನು ನ್ಯಾಯಪೀಠ ಎತ್ತಿ ಹಿಡಿಯಿತು ಹಾಗೂ ನೇಮಕಾತಿಗಳನ್ನು ದೃಢಪಡಿಸಿತು. ವಿಷಯವಾರು ಅಗತ್ಯವಿರುವ ಪರಿಣತಿಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೆ ಅಂತಹ ನಿಯಮವನ್ನು ರದ್ದುಗೊಳಿಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಅಭಿಪ್ರಾಯಪಟ್ಟಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.