ಸಂದೇಶ್‌ಖಾಲಿ | ವಿರುದ್ಧ ಮತ ಚಲಾಯಿಸಿದ್ದಕ್ಕೆ ಕಿರುಕುಳ: ನಿಯೋಗ ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ಮತ್ತು ಸಹಚರರು, ತಮ್ಮ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಬಡ ಬುಡಕಟ್ಟು ಕುಟುಂಬಗಳಿಗೆ ಕಿರುಕುಳ ನೀಡಿದ್ದಾರೆ ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ (ಎನ್‌ಸಿಎಸ್‌ಟಿ) ತನಿಖಾ ತಂಡ ಆರೋಪಿಸಿದೆ. ಬುಡಕಟ್ಟು ಕುಟುಂಬಗಳ ನರೇಗಾ ಕೂಲಿಯನ್ನು ಬಲವಂತವಾಗಿ ಕಿತ್ತುಕೊಂಡಿರುವುದಾಗಿಯೂ ದೂರುಗಳು ಲಭಿಸಿವೆ ಎಂದು ಹೇಳಿದೆ. ಎನ್‌ಸಿಎಸ್‌ಟಿ ಉಪಾಧ್ಯಕ್ಷ ಅನಂತ ನಾಯಕ್‌ ಅವರ ನೇತೃತ್ವದಲ್ಲಿ ತ್ರಿಸದಸ್ಯ ತಂಡವು ಈಚೆಗೆ ಸಂದೇಶ್‌ಖಾಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಶಹಜಹಾನ್‌ ಮತ್ತು ಸಹಚರರಿಗೆ ಪಶ್ಚಿಮ ಬಂಗಾಳದ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದೂ ಜನರು ಆರೋಪಿಸಿರುವುದಾಗಿ ಎನ್‌ಸಿಎಸ್‌ಟಿ ತಂಡ ತಿಳಿಸಿದೆ. ದೆಹಲಿಗೆ ಮರಳಿರುವ ತನಿಖಾ ತಂಡವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಮೂಲಗಳು ಹೇಳಿವೆ. ಶಹಜಹಾನ್‌ ಮತ್ತು ಸಹಚರರು ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಭೂಮಿ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿರುವ 50ಕ್ಕೂ ಹೆಚ್ಚು ದೂರುಗಳು ಆಯೋಗಕ್ಕೆ ಲಭಿಸಿವೆ ಎಂದು ಅನಂತ ನಾಯಕ್‌ ತಿಳಿಸಿದರು. ದೌರ್ಜನ್ಯದ ಕುರಿತು ಪೊಲೀಸರ ಮೊರೆ ಹೋದರೆ ಅವರು ಎಫ್‌ಐಆರ್‌ ದಾಖಲಿಸುತ್ತಿಲ್ಲ ಎಂದು ದೂರುದಾರರು ಆರೋಪಿಸಿರುವುದಾಗಿಯೂ ಅವರು ವಿವರಿಸಿದರು. ದೌರ್ಜನ್ಯ ಪ್ರಕರಣ ನಡೆದ ಬಳಿಕ ಶಹಜಹಾನ್‌ ಮತ್ತು ಸಹಚರರು ತಲೆಮರೆಸಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.