ಚಂಡೀಗಢ ಮೇಯರ್ ಚುನಾವಣೆ | ಮರು ಮತ ಎಣಿಕೆ: ಬಿಜೆಪಿಗೆ ಮುಖಭಂಗ ನವದೆಹಲಿ: ಎಎಪಿಯ ಕಾರ್ಪೊರೇಟರ್‌ ಕುಲದೀಪ್‌ ಕುಮಾರ್‌ ಅವರು ಚಂಡೀಗಢ ಮೇಯರ್‌ ಹುದ್ದೆಗೆ ಆಯ್ಕೆ ಆಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಘೋಷಿಸಿದೆ. ಚುನಾವಣಾಧಿಕಾರಿಯಾಗಿದ್ದ ಅನಿಲ್‌ ಮಸೀಹ್‌ ಅವರು ಎಂಟು ಮತಪತ್ರಗಳನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದ್ದಾರೆ ಎಂದು ಕೋರ್ಟ್‌ ಹೇಳಿದೆ. ಚುನಾವಣಾ ಪ್ರಜಾತಂತ್ರದ ಮೂಲಭೂತ ಜನಾದೇಶವು ಜಾರಿಯಾಗುವಂತೆ ನೋಡಿಕೊಳ್ಳಲು ಇಂತಹ ಅಸಾಧಾರಣ ಸನ್ನಿವೇಶಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯ ಎಂದು ನ್ಯಾಯಾಲಯವು ಅಭಿ‍ಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠವು ಸಂವಿಧಾನವು 142ನೇ ವಿಧಿಯ ಅಡಿಯಲ್ಲಿ ನೀಡಿರುವ ಪರಮಾಧಿಕಾರವನ್ನು ಬಳಸಿಕೊಂಡಿದೆ. ಮೇಯರ್‌ ಚುನಾವಣೆಯ ಫಲಿತಾಂಶವನ್ನು ರದ್ದುಪಡಿಸಿದೆ. ಜನವರಿ 30ರಂದು ನಡೆದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್‌ ಸೋನ್‌ಕರ್‌ 16 ಮತ ಪಡೆದು ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿತ್ತು. ಎಎಪಿ ಅಭ್ಯರ್ಥಿ 12 ಮತ ಪಡೆದಿದ್ದರೆ, 8 ಮತಗಳನ್ನು ತಿರಸ್ಕೃತಗೊಳಿಸಲಾಗಿತ್ತು. ಎಎಪಿ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದವು. ಮತ ಎಣಿಕೆಯ ವಿಡಿಯೊವನ್ನು ನ್ಯಾಯಾಲಯದಲ್ಲಿ ನೋಡಲಾಯಿತು. ವಿರೂಪಗೊಂಡ ಮತಪತ್ರಗಳನ್ನು ನ್ಯಾಯಮೂರ್ತಿಗಳು ಪರಿಶೀಲಿಸಿದರು. ಅನಿಲ್‌ ಮಸೀಹ್‌ ಅವರು ಮೇಯರ್‌ ಚುನಾವಣೆಯ ಮತದಾನದ ಪ್ರಕ್ರಿಯೆಯನ್ನು ಕಾನೂನುಬಾಹಿರವಾಗಿ ತಿರುಚಿದ್ದಾರೆ ಎಂದು ನ್ಯಾಯಪೀಠವು ತರಾಟೆಗೆ ತೆಗೆದುಕೊಂಡಿದೆ. ಅವರ ಮೇಲೆ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 340ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕಾರಣ ಕೇಳಿ ನೋಟಿಸ್‌ ನೀಡಿ ಎಂದು ಸೂಚಿಸಿದೆ. ಮಸೀಹ್‌ ಅವರು ನಾಮನಿರ್ದೇಶಿತ ಕಾರ್ಪೊರೇಟರ್‌ ಆಗಿದ್ದಾರೆ. ಇವರು ಬಿಜೆಪಿಯವರು. ಚುನಾವಣಾಧಿಕಾರಿಯಾಗಿ ಅವರು ನಡೆದುಕೊಂಡ ರೀತಿಯು ಗಂಭೀರ ದುರ್ವರ್ತನೆ ಎಂಬುದು ಸ್ಪಷ್ಟವಾಗಿ ಎದ್ದುಕಾಣುತ್ತದೆ ಎಂದು ಪೀಠ ಹೇಳಿದೆ. ನ್ಯಾಯಾಲಯದಲ್ಲಿ ಮಸೀಹ್‌ ಅವರು ಪ್ರಮಾಣ ಮಾಡಿ ನೀಡಿದ ಹೇಳಿಕೆ ಕೂಡ ಸುಳ್ಳು. ಈ ತಪ್ಪಿಗೂ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದೂ ನ್ಯಾಯಪೀಠ ಹೇಳಿದೆ. ‘ಕುಲದೀಪ್‌ ಕುಮಾರ್‌ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ನ್ಯಾಯಪೀಠವು ವಿವರವಾದ ಆದೇಶ ನೀಡಿದೆ. ‘ಚುನಾವಣಾಧಿಕಾರಿಯು ಮತ ಎಣಿಕೆಯನ್ನು ದಾಖಲಿಸಿಕೊಳ್ಳುವ ಹಂತದಲ್ಲಿ ಮಾತ್ರ ಲೋಪ ಸಂಭವಿಸಿದೆ. ಹಾಗಾಗಿ, ಇಡೀ ಚುನಾವಣಾ ಪ್ರಕ್ರಿಯೆಯನ್ನು ಕೈಬಿಡುವುದು ಸರಿ ಎನಿಸದು. ಇಡೀ ಚುನಾವಣಾ ಪ್ರಕ್ರಿಯೆಯನ್ನು ರದ್ದುಪಡಿಸಿದರೆ ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳ ವಿನಾಶವು ಇನ್ನಷ್ಟು ತೀವ್ರಗೊಂಡಂತಾಗುತ್ತದೆ. ಚುನಾವಣಾಧಿಕಾರಿ ಮಸೀಹ್‌ ಅವರು ನಡವಳಿಕೆಯಿಂದ ಹೀಗೆಯೇ ಆಗಿದೆ’ ಎಂದು ನ್ಯಾಯಪೀಠವು ಹೇಳಿದೆ. ಮತಪತ್ರಗಳನ್ನು ತಿರುಚಲಾಗಿದೆ ಎಂಬ ವಿಚಾರದ ಕುರಿತು ದೊಡ್ಡ ಹುಯಿಲೆದ್ದ ಬಳಿಕ, ಗೆದ್ದಿದ್ದಾರೆ ಎಂದು ಘೋಷಣೆ ಮಾಡಲಾಗಿದ್ದ ಬಿಜೆಪಿ ಅಭ್ಯರ್ಥಿ ಮನೋಜ್‌ ಕುಮಾರ್‌ ಸೊನ್‌ಕರ್‌ ಅವರು ರಾಜೀನಾಮೆ ನೀಡಿದ್ದಾರೆ. ಆ ಬಳಿಕ, ಎಎಪಿಯ ಮೂವರು ಕಾರ್ಪೊರೇಟರ್‌ಗಳು ಬಿಜೆಪಿ ಸೇರಿದ್ದಾರೆ. ಕಾರ್ಪೊರೇಟರ್‌ಗಳ ಖರೀದಿ ಆರೋಪವೂ ಆಗ ಕೇಳಿ ಬಂದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.