ಬಿಹಾರ ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ರಾಜೀನಾಮೆ ಪಟ್ನಾ: ಬಿಹಾರ ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ಆಗಿದ್ದ ಜೆಡಿಯುನ ಮಹೇಶ್ವರ್‌ ಹಜಾರಿ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವಿಧಾನಸಭಾ ಕಾರ್ಯಾಲಯ ಹೇಳಿದೆ. ಕಾರ್ಯಾಲಯದ ಅಧಿಸೂಚನೆಯ ಪ್ರಕಾರ, ಹಜಾರಿ ಅವರ ರಾಜೀನಾಮೆಯನ್ನು ಫೆಬ್ರುವರಿ 21ರ ನಸುಕಿನಿಂದ ಪರಿಗಣಿಸಲಾಗಿದೆ. ಕಲ್ಯಾಣಪುರ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಹಜಾರಿ ಅವರು 2021ರ ಮಾರ್ಚ್‌ನಿಂದ ಡೆಪ್ಯುಟಿ ಸ್ಪೀಕರ್‌ ಹುದ್ದೆ ಅಲಂಕರಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರಿ, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿರುವೆ. ನಾನು ಪಕ್ಷದ ಸಿಪಾಯಿ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧ’ ಎಂದು ಸ್ಪಷ್ಟಪಡಿಸಿದರು. ಸ್ಪೀಕರ್ ನಂದ ಕಿಶೋರ್ ಯಾದವ್ ಅವರು ಡೆಪ್ಯೂಟಿ ಸ್ಪೀಕರ್‌ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳು ಫೆ.22ರೊಳಗೆ ನಾಮಪತ್ರ ಸಲ್ಲಿಸಬೇಕು ಎಂದು ಅಧಿವೇಶನದಲ್ಲಿ ಪ್ರಕಟಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.