ಮುಂಬೈ: ಕಲ್ಯಾಣ ರೈಲು ನಿಲ್ದಾಣದಲ್ಲಿ 54 ಡಿಟೊನೇಟರ್ ಪತ್ತೆ ಠಾಣೆ(ಮಹಾರಾಷ್ಟ್ರ): ಜಿಲ್ಲೆಯ ಕಲ್ಯಾಣ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ 54ಕ್ಕೂ ಹೆಚ್ಚು ಡಿಟೊನೇಟರ್‌ಗಳಿದ್ದ ಎರಡು ಪೆಟ್ಟಿಗೆಗಳು ಬುಧವಾರ ಪತ್ತೆಯಾಗಿವೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಹೆಚ್ಚು ಜನಸಂದಣಿ ಇರುವ ಪ್ಲಾಟ್‌ಫಾರ್ಮ್‌ ನಂ. 1ರಲ್ಲಿ ಈ ಪೆಟ್ಟಿಗೆಗಳು ಕಂಡುಬಂದಿವೆ. ಯಾರೂ ಈ ಪೆಟ್ಟಿಗೆಗಳನ್ನು ಬಹುಕಾಲ ತೆಗೆದುಕೊಂಡು ಹೋಗದ ಕಾರಣ ಅನುಮಾನ ಬಂದು, ತಕ್ಷಣವೇ ಶ್ವಾನದಳ ಹಾಗೂ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್‌) ಸಿಬ್ಬಂದಿಯನ್ನು ಕರೆಸಿಕೊಂಡು ಪರಿಶೀಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಕಲ್ಯಾಣ ನಿಲ್ಧಾಣವು ಮುಂಬೈ ಹೊರವಲಯದ ಪ್ರಮುಖ ರೈಲು ನಿಲ್ದಾಣವಾಗಿದ್ದು, ಉಪನಗರ ಹಾಗೂ ದೂರದ ಊರುಗಳಿಗೆ ಸಂಚರಿಸುವ ರೈಲುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ಇಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.