ಮಾದಕ ವ್ಯಸನದ ವಿರುದ್ಧ ಹೋರಾಡಲು ಬಲಿಷ್ಠ ಕುಟುಂಬಗಳು ಬೇಕು: ಮೋದಿ ನವದೆಹಲಿ: ಮಾದಕ ವ್ಯಸನದಿಂದ ಯುವಕರನ್ನು ರಕ್ಷಿಸುವ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದು, ಇದಕ್ಕಾಗಿ ಬಲವಾದ ಕುಟುಂಬದ ಬೆಂಬಲ ವ್ಯವಸ್ಥೆಯ ಅಗತ್ಯವಿದೆ ಎಂದಿದ್ದಾರೆ. ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಕುಟುಂಬಗಳು ಬಲಿಷ್ಠವಾಗಿರುವುದು ಅತ್ಯಗತ್ಯ ಎಂದು ಗಾಯತ್ರಿ ಪರಿವಾರ ಆಯೋಜಿಸಿದ್ದ ‘ಅಶ್ವಮೇಧ ಯಾಗ’ ಕಾರ್ಯಕ್ರಮದ ವಿಡಿಯೊ ಭಾಷಣದಲ್ಲಿ ಅವರು ಹೇಳಿದರು. 'ಅಶ್ವಮೇಧ ಯಾಗ'ವು ಒಂದು ದೊಡ್ಡ ಸಾಮಾಜಿಕ ಅಭಿಯಾನವಾಗಿದೆ. ಲಕ್ಷಾಂತರ ಯುವಕರನ್ನು ವ್ಯಸನದಿಂದ ದೂರವಿಟ್ಟು ರಾಷ್ಟ್ರ ನಿರ್ಮಾಣ ಚಟುವಟಿಕೆಗಳತ್ತ ತೊಡಗಿಸುವ ಅದರ ಪಾತ್ರ ಮಹತ್ವದ್ದಾಗಿದೆ’ ಎಂದು ತಿಳಿಸಿದರು. ಮಾದಕ ವ್ಯಸನವು ಸಮಾಜಕ್ಕೆ ಮತ್ತು ದೇಶಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ ಎಂದು ಹೇಳಿದರು. ಕುಟುಂಬ ದುರ್ಬಲಗೊಂಡಾಗ ಮತ್ತು ಅದರ ಮೌಲ್ಯಗಳು ಕುಸಿದಾಗ, ಅದು ಸರ್ವತೋಮುಖ ಪರಿಣಾಮ ಬೀರುತ್ತದೆ. ಕುಟುಂಬ ಸದಸ್ಯರು ದಿನಗಟ್ಟಲೆ ಭೇಟಿಯಾಗದಿದ್ದರೆ ಅಥವಾ ಒಟ್ಟಿಗೆ ಕುಳಿತು ಸಂವಹನ ನಡೆಸದಿದ್ದರೆ, ಅಪಾಯಗಳು ಹೆಚ್ಚಾಗುತ್ತವೆ. ಆದ್ದರಿಂದ, ದೇಶವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಕುಟುಂಬಗಳು ಬಲವಾಗಿರಬೇಕು ಎಂದು ಪ್ರಧಾನಿ ಹೇಳಿದರು. ಮಾದಕ ವ್ಯಸನದ ಹಿಡಿತದಿಂದ ಯುವಕರನ್ನು ರಕ್ಷಿಸಬೇಕು. ಈಗಾಗಲೇ, ಚಟಕ್ಕೆ ಬಿದ್ದಿರುವವರನ್ನು ಹೊರಗೆ ತರಬೇಕು ಎಂದರು. ‘ವ್ಯಸನವು ಒಬ್ಬ ವ್ಯಕ್ತಿ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೊಡ್ಡ ಹಾನಿಗೆ ಕಾರಣವಾಗುತ್ತದೆ ಎಂದರು. ವ್ಯಸನಮುಕ್ತ ಭಾರತ ನಿರ್ಮಾಣ ಅಭಿಯಾನಕ್ಕೆ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಮೋದಿ, ಈವರೆಗೆ ಈ ಅಭಿಯಾನದಡಿ 11 ಕೋಟಿ ಜನರು ತೊಡಗಿಸಿಕೊಂಡಿದ್ದಾರೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.