ಏಕ ಹಂತದ ಚುನಾವಣೆಗೆ ತಮಿಳುನಾಡು ಪಕ್ಷಗಳ ಒತ್ತಾಯ: ರಾಜೀವ್ ಕುಮಾರ್ ಚೆನ್ನೈ: ತಮಿಳುನಾಡಿನ ಬಹುತೇಕ ಎಲ್ಲ ಪಕ್ಷಗಳು ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಏಕ ಹಂತದಲ್ಲಿ ನಡೆಸುವಂತೆ ಚುನಾವಣಾ ಆಯೋಗವನ್ನು (ಇಸಿ) ಒತ್ತಾಯಿಸಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ಹೇಳಿದರು. ಅವರು ಚುನಾವಣಾ ಸಿದ್ಧತೆಗಳ ಪರಿವೀಕ್ಷಣೆಗಾಗಿ ತಮಿಳುನಾಡಿಗೆ ಎರಡು ದಿನಗಳ ಕಾಲ ಭೇಟಿ ನೀಡಿದ್ದರು. ‘ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳು ಸಂಪೂರ್ಣ ನಿಷ್ಪಕ್ಷಪಾತ’ ಆಗಿರಬೇಕಿರುವುದರಿಂದ ಎಲ್ಲ ಪಕ್ಷಗಳಿಗೂ ಸಮಾನ ಮತ್ತು ಮುಕ್ತ ಅವಕಾಶ ನೀಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದರು. ತಮ್ಮ ತಮಿಳುನಾಡು ಭೇಟಿಯ ಬಗ್ಗೆ ವರದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ‘ಬಹುತೇಕ ಪಕ್ಷಗಳು ಏಕ ಹಂತದ ಚುನಾವಣೆ ಬಯಸಿದವು ಮತ್ತು ಚುನಾವಣೆಯಲ್ಲಿ ಹಣದ ಬಲವನ್ನು ಕುಗ್ಗಿಸುವಂತೆ ಒತ್ತಾಯಿಸಿದವು. ಮತದಾನಕ್ಕಾಗಿ ಹಣ ಹಂಚಿಕೆ ಮಾಡುವ ಮತ್ತು ಇತರೆ ಪ್ರಲೋಭನೆ ಒಡ್ಡುವ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಪಕ್ಷಗಳು ಒತ್ತಾಯಿಸಿದವು’ ಎಂದು ತಿಳಿಸಿದರು. ಮತದಾರರಿಗೆ ಹಣ ಮತ್ತು ಮದ್ಯ ಹಂಚುವುದರ ಬಗ್ಗೆ ಮಾತನಾಡಿದ ಅವರು, ‘ಚುನಾವಣಾ ಆಯೋಗವು ಇದಕ್ಕಾಗಿ ಸಿವಿಜಿಲ್ ( ) ಎನ್ನುವ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಹಣ, ಮದ್ಯ ಹಂಚುವುದು ಕಂಡುಬಂದರೆ, ಬಳಕೆದಾರರು ಅದರ ಫೋಟೊ ಕ್ಲಿಕ್ಕಿಸಿ ಆ್ಯಪ್‌ ಮೂಲಕ ಕಳಿಸಬಹುದು. ದೂರು ನೀಡಿದ 100 ನಿಮಿಷಗಳ ಒಳಗೆ ಅದನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.