ಅಸ್ಸಾಂ: ಮುಸ್ಲಿಂ ವಿವಾಹ ಕಾಯ್ದೆ ರದ್ದತಿಗೆ ಮಸೂದೆ ಗುವಾಹಟಿ: ಮದುವೆ ಹಾಗೂ ವಿಚ್ಛೇದನ ನೋಂದಣಿ ಮಾಡುವುದನ್ನು ಮುಸ್ಲಿಂ ಸಮುದಾಯದಕ್ಕೆ ಕಡ್ಡಾಯಗೊಳಿಸುವ ಮಸೂದೆಯನ್ನು ಅಸ್ಸಾಂ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಇದಕ್ಕಾಗಿ ‘1935ರ ಅಸ್ಸಾಂ ಮುಸ್ಲಿಂ ಮದುವೆ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ’ಯನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸಲಾಗಿದೆ. ಇದೇ ಫೆಬ್ರುವರಿ 23ರಂದೇ ಈ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿತ್ತು. ಇದನ್ನು ವಿರೋಧ ಪಕ್ಷಗಳು ಖಂಡಿಸಿದ್ದವು. ‘ಚುನಾವಣಾ ವರ್ಷದಲ್ಲಿ ಮತಗಳನ್ನು ಧ್ರುವೀಕರಿಸಲು ಸರ್ಕಾರ ಯತ್ನಿಸುತ್ತಿದೆ. ಈ ನಿರ್ಧಾರವು ಮುಸ್ಲಿಂ ವಿರೋಧಿ ಮತ್ತು ಆ ಸಮುದಾಯದ ಕುರಿತು ತಾರತಮ್ಯದಿಂದ ಕೂಡಿದೆ’ ಎಂದಿದ್ದವು. ‘ಮುಸ್ಲಿಂ ಮದುವೆ ನೋಂದಣಿ ಮಾಡಿಸುವವರು ಮತ್ತು ಬಾಲ್ಯ ವಿವಾಹ ಮಾಡುವವರು ಈಗಿರುವ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳಲು ಅವಕಾಶವಿದೆ. ಇದನ್ನು ಈ ಮಸೂದೆ ತಡೆಯುತ್ತದೆ’ ಎಂದು ಕಂದಾಯ ಹಾಗೂ ವಿಪತ್ತು ನಿರ್ವಹಣಾ ಸಚಿವ ಜೋಗನ್‌ ಮೋಹನ್‌ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.