ತೆಲಂಗಾಣ ಕಾಂಗ್ರೆಸ್‌ನ ಹೊಸ ಎಟಿಎಂ: ನರೇಂದ್ರ ಮೋದಿ ಹೈದರಾಬಾದ್‌: ‘ಬಿಜೆಪಿಯ ಅಲೆಯು ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷವನ್ನು ಅಳಿಸಿಹಾಕಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು. ಸೋಮವಾರ ತೆಲಂಗಾಣದ ಜಗ್ತಿಯಾಲ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ತೆಲಂಗಾಣವು ಕಾಂಗ್ರೆಸ್‌ನ ಹೊಸ ಎಟಿಎಂ ಆಗಿದೆ. ರಾಜ್ಯದಿಂದ ಲೂಟಿ ಮಾಡಿದ ಹಣವನ್ನು ವಿಭಜಕ ರಾಜಕೀಯಕ್ಕೆ ಖರ್ಚು ಮಾಡಲಾಗುತ್ತಿದೆ’ ಎಂದು ಆರೋಪಿಸಿದರು. ಭಾನುವಾರ ಮುಂಬೈನಲ್ಲಿ ರಾಹುಲ್ ಗಾಂಧಿಯವರು ‘ಶಕ್ತಿ’ ಕುರಿತು ನೀಡಿದ ಹೇಳಿಕೆ ಬಗ್ಗೆಯೂ ಮೋದಿ ವಾಗ್ದಾಳಿ ನಡೆಸಿ, ಇಂಡಿಯಾ ಒಕ್ಕೂಟದ ಪ್ರಣಾಳಿಕೆಯು ‘ಶಕ್ತಿ’ಯನ್ನು ನಾಶಗೊಳಿಸುವ ಕುರಿತು ಹೇಳಿದೆ. ಈ ಚುನಾವಣೆಯು ‘ಶಕ್ತಿ’ಯನ್ನು ನಾಶಮಾಡಲು ಬಯಸುವವರು ಮತ್ತು ಅವರನ್ನು ಆರಾಧಿಸುವವರ ನಡುವಿನ ಹೋರಾಟವಾಗಿದೆ ಎಂದು ಬಣ್ಣಿಸಿದರು. ‘ನನಗೆ ಪ್ರತಿಯೊಬ್ಬ ತಾಯಿ ಮತ್ತು ಪ್ರತಿ ಮಗಳು, ಸಹೋದರಿ ‘ಶಕ್ತಿ’ಯ ರೂಪ. ಅವರನ್ನು ಆರಾಧಿಸುತ್ತೇನೆ. ರಾಷ್ಟ್ರವು ಚಂದ್ರಯಾನದ ಯಶಸ್ಸನ್ನು ‘ಶಿವ ಶಕ್ತಿ’ಗೆ ಅರ್ಪಿಸಿದೆ. ಅಂತಹದ್ದರಲ್ಲಿ ವಿರೋಧ ಪಕ್ಷಗಳು ‘ಶಕ್ತಿ’ಯನ್ನು ನಾಶಪಡಿಸುವ ಬಗ್ಗೆ ಮಾತನಾಡುತ್ತಿವೆ. ನಾನು ಅವರ ಸವಾಲನ್ನು ಸ್ವೀಕರಿಸುತ್ತೇನೆ. ತಾಯಂದಿರು ಮತ್ತು ಸಹೋದರಿಯರ ಭದ್ರತೆಗಾಗಿ ನಾನು ನನ್ನ ಪ್ರಾಣವ ತ್ಯಾಗಕ್ಕೂ ಸಿದ್ಧನಿದ್ದೇನೆ’ ಎಂದು ಗುಡುಗಿದರು. ಬಿಆರ್‌ಎಸ್ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡರೆ, ಕಾಂಗ್ರೆಸ್ ತೆಲಂಗಾಣದ ಕನಸುಗಳನ್ನು ನುಚ್ಚುನೂರು ಮಾಡಿದೆ. ತೆಲಂಗಾಣ ರಚನೆಯ ನಂತರ 10 ವರ್ಷಗಳ ಕಾಲ ಬಿಆರ್‌ಎಸ್‌ ರಾಜ್ಯವನ್ನು ನಿರ್ದಯವಾಗಿ ಲೂಟಿ ಮಾಡಿತ್ತು. ಈಗ ಕಾಂಗ್ರೆಸ್‌ ಈ ರಾಜ್ಯವನ್ನು ತನ್ನ ಸ್ವಂತ ಎಟಿಎಂ ಮಾಡಿಕೊಂಡಿದೆ’ ಎಂದು ಕಿಡಿಕಾರಿದರು. ‘ಬೋಫೋರ್ಸ್ ಅಥವಾ ಕಾಳೇಶ್ವರಂ ಯೋಜನೆಯಾಗಲಿ ಈ ದೇಶದ ಪ್ರತಿಯೊಂದು ಹಗರಣದ ಹಿಂದೆ ಕುಟುಂಬ ಪರಿವಾರವಾದಿ ಪಕ್ಷಗಳಿವೆ. ಬಿಆರ್‌ಎಸ್, ಕಾಂಗ್ರೆಸ್ ಎರಡೂ ಈ ಅಪರಾಧಗಳಲ್ಲಿ ಪಾಲುದಾರರು. ಇವರು ಪರಸ್ವರರ ಹಗರಣಗಳನ್ನು ಕೆದಕುವುದಿಲ್ಲ. ತೆಲಂಗಾಣದ ಜನರನ್ನು ವಂಚಿಸಿರುವವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಇದೇ ಮೋದಿಯ ಗ್ಯಾರಂಟಿ’ ಎಂದು ಭರವಸೆ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.