ಸಿಕ್ಕಿಂ: ಬಿಜೆಪಿ ಏಕಾಂಗಿ ಸ್ಪರ್ಧೆ ಗ್ಯಾಂಗ್ಟಕ್: ಸಿಕ್ಕಿಂನ ಆಡಳಿತಾರೂಢ ‘ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ’ (ಎಸ್‌ಕೆಎಂ) ಜತೆಗಿನ ತನ್ನ ಮೈತ್ರಿ ಅಂತ್ಯಗೊಂಡಿದೆ ಎಂದು ಘೋಷಿಸಿರುವ ಬಿಜೆಪಿ, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ತಿಳಿಸಿದೆ. ಎಸ್‌ಕೆಎಂ ಜತೆ ಸೀಟು ಹಂಚಿಕೆ ಬಗ್ಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ರಾಜ್ಯಕ್ಕೆ ಹಿಂದಿರುಗಿದ ಬಳಿಕ ಬಿಜೆಪಿ ಸಿಕ್ಕಿಂ ರಾಜ್ಯ ಘಟಕದ ಅಧ್ಯಕ್ಷ ಡಿ.ಆರ್.ಥಾಪಾ ಮೈತ್ರಿ ಅಂತ್ಯವಾಗಿರುವುದನ್ನು ಘೋಷಿಸಿದರು. ರಂಗ್ಪೋನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಥಾಪಾ, ‘ಭ್ರಷ್ಟಾಚಾರದ ವಿರುದ್ಧದ ಸ್ವತಂತ್ರ ಕಾರ್ಯಾಚರಣೆ ಮತ್ತು ಸಿಕ್ಕಿಂ ಅಭಿವೃದ್ಧಿಗೆ ಬದ್ಧವಾದ ಹೊಸ ಯುಗ ಆರಂಭವಾಗಿದೆ. ಮೈತ್ರಿಯ ವಿಸರ್ಜನೆಯು ರಾಜ್ಯದ ಜನರ ಸೇವೆ ಮಾಡುವ ಅತ್ಯುನ್ನತ ಅವಕಾಶವನ್ನು ಪಕ್ಷಕ್ಕೆ ಒದಗಿಸಿದೆ’ ಎಂದು ಹೇಳಿದರು. ಸಿಕ್ಕಿಂನ ಎಲ್ಲ 32 ವಿಧಾನಸಭಾ ಕ್ಷೇತ್ರಗಳು ಮತ್ತು ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಕ್ಕೆ ಪಕ್ಷವು ಸಿದ್ಧವಾಗಿದೆ ಎಂದು ಪಕ್ಷದ ಕೇಂದ್ರ ನಾಯಕತ್ವಕ್ಕೆ ಮನವರಿಕೆ ಮಾಡಿರುವುದಾಗಿ ಥಾಪಾ ತಿಳಿಸಿದರು. ಚುನಾವಣೋತ್ತರ ಮೈತ್ರಿ ಸಾಧ್ಯತೆ: ಇನ್ನೊಂದೆಡೆ, ಥಾಪಾ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಕೆಎಂ ಮುಖಂಡ ಮತ್ತು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಜಾಕೊಬ್ ಖಾಲಿಂಗ್ ರೈ, ‘ಕಳೆದ ಚುನಾವಣೆಯಲ್ಲಿಯೂ ನಾವು ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರಲಿಲ್ಲ. ಆದರೆ, ದೇಶದ ಮತ್ತು ರಾಜ್ಯದ ಹಿತದೃಷ್ಟಿಯಿಂದ ಚುನಾವಣೋತ್ತರವಾಗಿ ಮೈತ್ರಿಯನ್ನು ಸಾಧಿಸಿದ್ದೆವು. ಈ ಬಾರಿಯೂ ಅಂತಹ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ’ ಎಂದು ಹೇಳಿದರು. ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವ ನಿರ್ಣಯ ಕೈಗೊಂಡ ಬಿಜೆಪಿಯನ್ನು ಅವರು ಅಭಿನಂದಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.