ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಕೈಬಿಟ್ಟಿದ್ದಕ್ಕೆ ಕೇಂದ್ರ ಸಮರ್ಥನೆ ನವದೆಹಲಿ: ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ನ್ಯಾಯಾಂಗದ ಸದಸ್ಯರೊಬ್ಬರು ಇದ್ದರು ಎನ್ನುವುದೇ ಚುನಾವಣಾ ಆಯೋಗವು ಸ್ವತಂತ್ರ ಎನ್ನಲು ಆಧಾರವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರವೊಂದನ್ನು ಸಲ್ಲಿಸಿರುವ ಕೇಂದ್ರ ಕಾನೂನು ಸಚಿವಾಲಯವು, ಮಾರ್ಚ್‌ 14ರಂದು ಇಬ್ಬರು ಚುನಾವಣಾ ಆಯುಕ್ತರನ್ನು ಅವಸರದಲ್ಲಿ ನೇಮಕ ಮಾಡಲಾಗಿದೆ ಎಂಬ ವಾದವನ್ನು ಅಲ್ಲಗಳೆದಿದೆ. ಚುನಾವಣಾ ಆಯುಕ್ತರ ಆಯ್ಕೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಇಲ್ಲದ ಸಮಿತಿಯನ್ನು ರಚಿಸಲು ಅವಕಾಶ ಕಲ್ಪಿಸಿದ 2023ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಾರನೆಯ ದಿನ (ಮಾರ್ಚ್ 15) ನಡೆಸಬೇಕಿತ್ತು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕ, ಸೇವಾ ನಿಯಮಗಳು ಹಾಗೂ ಸೇವಾವಧಿ) ಕಾಯ್ದೆ –2023ನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ಪ್ರಶ್ನಿಸಿದೆ. ‘ಆಯ್ಕೆ ಸಮಿತಿಯು ನಿರ್ದಿಷ್ಟ ಸ್ವರೂಪವನ್ನು ಹೊಂದಿದ್ದರೆ ಮಾತ್ರ ಪ್ರಾಧಿಕಾರವೊಂದರ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬಹುದು ಎಂಬ ತಪ್ಪು ನೆಲೆಯಲ್ಲಿ ಅರ್ಜಿದಾರರು ವಾದಿಸಿದ್ದಾರೆ’ ಎಂದು ಕೇಂದ್ರ ಹೇಳಿದೆ. ಆಯ್ಕೆ ಸಮಿತಿಯಲ್ಲಿ ನ್ಯಾಯಾಂಗದ ಒಬ್ಬ ಸದಸ್ಯ ಇರುವುದೇ ಚುನಾವಣಾ ಆಯೋಗದ ಅಥವಾ ಇತರ ಯಾವುದೇ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಮೂಲ, ನ್ಯಾಯಾಂಗದ ಸದಸ್ಯರ ಉಪಸ್ಥಿತಿಯಿಂದಲೇ ಸ್ವಾತಂತ್ರ್ಯ ಎಂದು ಹೇಳಲಾಗದು ಎಂದು ಕೂಡ ಕೇಂದ್ರವು ವಿವರಿಸಿದೆ. ಶೋಧ ಸಮಿತಿಯು ಚುನಾವಣಾ ಆಯುಕ್ತರ ಸ್ಥಾನಕ್ಕೆ ಆರು ಜನರ ಹೆಸರು ಗಳನ್ನು ಅಂತಿಮಗೊಳಿಸಿದ ನಂತರ, ಅವುಗಳನ್ನು ಲೋಕಸಭೆಯಲ್ಲಿನ ಅತಿದೊಡ್ಡ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಮಾರ್ಚ್ 13ರಂದು ನೀಡಲಾಗಿತ್ತು ಎಂದು ಕೇಂದ್ರವು ತಿಳಿಸಿದೆ. ಚುನಾವಣಾ ಆಯುಕ್ತರಾಗಿ ನೇಮಕಗೊಂಡವರ ವಿಶ್ವಾಸಾರ್ಹತೆಯನ್ನು ಯಾವ ಸಂದರ್ಭದಲ್ಲಿಯೂ ಪ್ರಶ್ನಿಸಲಾಗಿಲ್ಲ. ಶೋಧ ಸಮಿತಿಯು ನೀಡಿದ್ದ ಪಟ್ಟಿಯಲ್ಲಿದ್ದವರ ಅರ್ಹತೆಯ ಬಗ್ಗೆ, ದಕ್ಷತೆಯ ಬಗ್ಗೆ ಯಾವ ಸಂದರ್ಭ ದಲ್ಲಿಯೂ ದೂರುಗಳು ಬಂದಿಲ್ಲ ಎಂದು ಕೂಡ ಕೇಂದ್ರವು ವಿವರಣೆ ನೀಡಿದೆ. 2023ರ ಕಾಯ್ದೆಯು ಚುನಾವಣಾ ಆಯುಕ್ತರು ಹಾಗೂ ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಯಲ್ಲಿ ಹೆಚ್ಚು ಪ್ರಜಾಸತ್ತಾತ್ಮಕವಾದ, ಹೆಚ್ಚಿನ ಭಾಗೀದಾರಿಕೆಯ ಹಾಗೂ ಹೆಚ್ಚು ಒಳಗೊಳ್ಳುವಿಕೆಯ ಪ್ರಕ್ರಿಯೆಯನ್ನು ರೂಪಿಸುವ ಕೆಲಸ ಮಾಡಿದೆ ಎಂದು ಪ್ರತಿಪಾದಿಸಿದೆ. ‘ನ್ಯಾಯಾಂಗದ ಸದಸ್ಯರು ಇಲ್ಲದಿರುವ ಆಯ್ಕೆ ಸಮಿತಿಯು ಪಕ್ಷಪಾತಿಯಾಗಿ ಇರುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ’ ಎಂದು ಕೇಂದ್ರ ವಾದಿಸಿದೆ. ನೇಮಕಾತಿಯಲ್ಲಿ ಕಾರ್ಯಾಂಗದ ಪ‍ರಮಾಧಿಕಾರ ಇದ್ದ ಸಂದರ್ಭದಲ್ಲಿಯೂ ಚುನಾವಣಾ ಆಯುಕ್ತರು ನಿಷ್ಪಕ್ಷಪಾತವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗಿದೆ ಎಂದು ಹೇಳಿದೆ. ಈ ಕಾಯ್ದೆಯ ಅಡಿಯಲ್ಲಿ ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿತ್ತು. ನಿವೃತ್ತ ಐಎಎಸ್ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. 2023ರ ಕಾಯ್ದೆಯ ಅನ್ವಯ, ಪ್ರಧಾನಿ, ಪ್ರಧಾನಿ ನೇಮಕ ಮಾಡುವ ಕೇಂದ್ರದ ಒಬ್ಬ ಸಚಿವ ಹಾಗೂ ವಿರೋಧ ಪಕ್ಷದ ನಾಯಕ ಇರುವ ಸಮಿತಿಯು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುತ್ತದೆ. 2023ರ ಮಾರ್ಚ್‌ನಲ್ಲಿ ತೀರ್ಪೊಂದನ್ನು ನೀಡಿದ್ದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು, ಸಿಜೆಐ, ಪ್ರಧಾನಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಇರುವ ಸಮಿತಿಯ ಸಲಹೆ ಆಧರಿಸಿ ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ಹೇಳಿತ್ತು. ಉಚಿತ ಕೊಡುಗೆ: ವಿಚಾರಣೆಗೆ ಸಮ್ಮತಿ ನವದೆಹಲಿ: ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಉಚಿತ ಕೊಡುಗೆಗಳನ್ನು ಘೋಷಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಗುರುವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಪ್ರಕರಣಗಳ ಪಟ್ಟಿಗೆ ಸೇರಿಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ. ಈ ರೀತಿ ಮಾಡುವ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಪಡಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೂಡ ಅರ್ಜಿಯಲ್ಲಿ ಕೋರಲಾಗಿದೆ. ‘ಇದು ಮುಖ್ಯವಾದುದು, ಇದನ್ನು ನಾವು ಗುರುವಾರಕ್ಕೆ ಇರಿಸಿಕೊಳ್ಳುತ್ತೇವೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ಪೀಠವು ಹೇಳಿದೆ. ವಕೀಲ ಅಶ್ವಿನಿ ಉಪಾಧ್ಯಾಯ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ‘ಚುನಾವಣೆಯ ಮೇಲೆ ಕಣ್ಣಿಟ್ಟು ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವ ಈಚಿನ ವಿದ್ಯಮಾನವು ಪ್ರಜಾತಾಂತ್ರಿಕ ಮೌಲ್ಯಗಳ ಉಳಿವಿಗೆ ಎದುರಾಗಿರುವ ಅತಿದೊಡ್ಡ ಬೆದರಿಕೆ. ಇದು ಸಂವಿಧಾನದ ಆಶಯಗಳಿಗೆ ಹಾನಿ ಉಂಟುಮಾಡುತ್ತದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ‘ಈ ಅನೈತಿಕ ಪದ್ಧತಿಯು ಅಧಿಕಾರದಲ್ಲಿ ಉಳಿದುಕೊಳ್ಳಲು ಮತದಾರರಿಗೆ ಲಂಚ ಕೊಡುವುದಕ್ಕೆ ಸಮ’ ಎಂದು ಅದರಲ್ಲಿ ಹೇಳಲಾಗಿದೆ. ‘ಅತಾರ್ಕಿಕವಾದ ರೀತಿಯಲ್ಲಿ ಉಚಿತ ಕೊಡುಗೆಗಳನ್ನು ರಾಜಕೀಯ ಪಕ್ಷಗಳು ಸಾರ್ವಜನಿಕರ ಹಣ ಬಳಸಿ ಚುನಾವಣೆಗೆ ಮೊದಲು ನೀಡಬಾರದು ಎಂಬ ನಿಯಮವನ್ನು ರೂಪಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕು’ ಎಂಬ ಕೋರಿಕೆ ಕೂಡ ಅರ್ಜಿಯಲ್ಲಿ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.