ಶಾಲಾ ಉದ್ಯೋಗ ಹಗರಣ: ಪ.ಬಂಗಾಳ ಸಚಿವ ಚಂದ್ರನಾಥ್ ನಿವಾಸದಲ್ಲಿ ಇ.ಡಿ ಶೋಧ ಕೋಲ್ಕತ್ತ: ಶಾಲಾ ಉದ್ಯೋಗ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ತಂಡವು ಶುಕ್ರವಾರ ಪಶ್ಚಿಮ ಬಂಗಾಳದ ಸಚಿವ ಚಂದ್ರನಾಥ್ ಸಿನ್ಹಾ ಅವರ ನಿವಾಸದಲ್ಲಿ ಶೋಧ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿರ್‌ಭೂಮ್‌ ಜಿಲ್ಲೆಯ ಬೋಲ್‌ಪುರಲ್ಲಿರುವ ಚಂದ್ರನಾಥ್ ಸಿನ್ಹಾ ನಿವಾಸದ ಮೇಲೆ ಕೇಂದ್ರ ಪಡೆಗಳೊಂದಿಗೆ ದಾಳಿ ನಡೆಸಿದ ಇ.ಡಿ ತಂಡ ಶೋಧ ನಡೆಸಿತು. ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಚಂದ್ರನಾಥ್ ಸಿನ್ಹಾ ಅವರು ಎಂಎಸ್‌ಎಂಇ ಮತ್ತು ಜವಳಿ ಖಾತೆಗಳನ್ನು ಹೊಂದಿದ್ದಾರೆ. ಶಾಲಾ ನೇಮಕಾತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಸಂಬಂಧಿಸಿದಂತೆ ಶೋಧ ನಡೆಸಲಾಯಿತು. ಈ ವೇಳೆ ಸಚಿವರು ಮನೆಯಲ್ಲಿ ಇರಲಿಲ್ಲ. ಅವರ ಕುಟುಂಬದೊಂದಿಗೆ ಮಾತನಾಡಿದ್ದೇವೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಇ.ಡಿ ದಾಳಿ ಕುರಿತು ಪ್ರತಿಕ್ರಿಯಿಸಿರುವ ಚಂದ್ರನಾಥ್, ನಾನು ಯಾವುದೇ ತಪ್ಪು ಮಾಡಿಲ್ಲ. ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಏತನ್ಮಧ್ಯೆ, ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಲೇಕ್ ಟೌನ್ ಸೇರಿದಂತೆ ಕೋಲ್ಕತ್ತದ ವಿವಿಧ ಭಾಗಗಳಲ್ಲಿ ಕೆಲವು ಉದ್ಯಮಿಗಳ ನಿವಾಸಗಳಲ್ಲಿ ಇ.ಡಿ ಏಕಕಾಲದಲ್ಲಿ ಶೋಧ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮುನ್ನ ದನ ಕಳ್ಳಸಾಗಣೆ ಮತ್ತು ಕಲ್ಲಿದ್ದಲು ಹಗರಣದಲ್ಲಿ ಚಂದ್ರನಾಥ್ ಅವರಿಗೆ ಸಿಬಿಐ ಸಮನ್ಸ್ ನೀಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.