ರಾಷ್ಟ್ರಪತಿ ವಿರುದ್ಧ ’ಸುಪ್ರೀಂ’ಗೆ ಮೊರೆ: ಬಿಜೆಪಿ ಟೀಕೆ ತಿರುವನಂತಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, ‘ಮಹಿಳೆಯರು ಹಾಗೂ ಬುಡಕಟ್ಟು ಸಮುದಾಯಗಳ ಬಗ್ಗೆ ಸಿಪಿಎಂಗೆ ಇರುವ ತಾರತಮ್ಯವನ್ನು ಇದು ತೋರಿಸುತ್ತಿದೆ’ ಎಂದಿದೆ. ಸಿಪಿಎಂ ಯಾವಾಗಲೂ ಮಹಿಳಾ ವಿರೋಧಿ ನಿಲುವಿಗೆ ಅಳವಡಿಸಿಕೊಂಡಿದೆ. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿದಾಗಲೂ ಅವರು ಅದನ್ನು ವಿರೋಧಿಸಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ವಿ. ಮುರಳೀಧರನ್‌ ಆರೋಪಿಸಿದ್ದಾರೆ. ರಾಜ್ಯ ವಿಧಾನಸಭೆ ಅಂಗೀಕರಿಸಿದ ನಾಲ್ಕು ಮಸೂದೆಗಳಿಗೆ ಒಪ್ಪಿಗೆ ನೀಡದ ಕಾರಣ ಮುರ್ಮು ವಿರುದ್ಧ ಕೇರಳದ ಎಲ್‌ಡಿಎಫ್‌ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಆದರೆ, ರಾಷ್ಟ್ರಪತಿಗಳ ಈ ಕ್ರಮವು ಸಂವಿಧಾನಕ್ಕೆ ಅನುಗುಣವಾಗಿಯೇ ಇದೆ ಎಂದು ಮುರಳೀಧರನ್‌ ಹೇಳಿದ್ದಾರೆ. ಎಡಪಕ್ಷವು ಮಹಿಳಾ ವಿರೋಧಿಯಾಗಿದ್ದು, 2022ರವರೆಗೂ ಆ ಪಕ್ಷದ ಪಾಲಿಟ್‌ ಬ್ಯುರೊದಲ್ಲಿ ಮಹಿಳಾ ಸದಸ್ಯರು ಇರಲಿಲ್ಲ. ನಾವು ಹಿಂದಿರುಗಿ ನೋಡಿದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಸಿಪಿಎಂ ಏಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಮಹಿಳೆಯರ ಬಗ್ಗೆ ಸಿಪಿಎಂನ ನಾಯಕತ್ವಕ್ಕೆ ಇರುವ ತಾತ್ಸಾರವೇ ಇದಕ್ಕೆ ಕಾರಣ. ಮಸೂದೆಗಳಿಗೆ ಒಪ್ಪಿಗೆ ಸಿಗದಿರುವುದು ಇದೇ ಮೊದಲೇನಲ್ಲ. ಆದರೆ, ಇದೇ ಮೊದಲ ಬಾರಿಗೆ ರಾಷ್ಟ್ರಪತಿ ವಿರುದ್ಧ ಕೋರ್ಟ್‌ಗೆ ಹೋಗಲಾಗಿದೆ. ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಪರವಾಗಿರುವ ದೇಶದ ಜನರು ರಾಷ್ಟ್ರಪತಿ ಮುರ್ಮು ವಿರುದ್ಧದ ಯಾವುದೇ ಕ್ರಮವನ್ನು ವಿರೋಧಿಸುತ್ತಾರೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.