ಸಿಎಎ: ಬಿಜೆಪಿ ನೀಡಿರುವ ಸಂದೇಶ ಏನು? ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯು ಸಮುದಾಯಗಳನ್ನು ಒಡೆಯುವ ಮೂಲಕ ಕೋಮು ಧ್ರುವೀಕರಣದ ಪ್ರಯತ್ನ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅದರಲ್ಲೂ ಮುಖ್ಯವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಸಿಎಎನಿಂದ ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಅಸ್ಸಾಂನ 1.5 ಲಕ್ಷ ಅಲ್ಪಸಂಖ್ಯಾತರು ಸೇರಿದಂತೆ ಬುಡಕಟ್ಟು, ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ಗುರಿಯಾಗಿಸಿಯೇ ಸಿಎಎ ಜಾರಿ ಮಾಡಲಾಗಿದೆ ಎನ್ನುವ ಆರೋಪವಿದೆ 2024ರ ಲೋಕಸಭಾ ಚುನಾವಣೆಯ ಕಾವು ಏರಿಸುತ್ತಿರುವ ಪ್ರಮುಖ ವಿಷಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯೂ (ಸಿಎಎ) ಒಂದಾಗಿದೆ. ಚುನಾವಣೆಯ ವೇಳಾಪಟ್ಟಿ ಘೋಷಣೆ ಆಗಿದ್ದು ಮಾರ್ಚ್ 16ರಂದು. ಅದಕ್ಕೆ ಕೇವಲ ಐದು ದಿನಗಳ ಮುಂಚೆ, ಮಾರ್ಚ್ 11ರಂದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಿಎಎ ನಿಯಮಗಳ ಅಧಿಸೂಚನೆ ಹೊರಡಿಸಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿದ ವಿಧಾನವೇ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಸೂದೆಯು ಸಂಸತ್ತಿನಲ್ಲಿ ಅನುಮೋದನೆಗೊಂಡಿದ್ದು 2019ರ ಡಿಸೆಂಬರ್‌ 11ರಂದು. ಮರುದಿನವೇ ಅದಕ್ಕೆ ರಾಷ್ಟ್ರಪತಿಯ ಅಂಕಿತ ಬಿದ್ದಿತ್ತು. ಒಂದು ತಿಂಗಳ ನಂತರ, ಜನವರಿ 10, 2020ರಂದು, ಸರ್ಕಾರವು ಅದರ ಬಗ್ಗೆ ಗೆಜೆಟ್‌ ಅಧಿಸೂಚನೆ ಪ್ರಕಟಿಸಿತ್ತು. ಸಂಸದೀಯ ಕಾರ್ಯಗಳ ಕೈಪಿಡಿಯ ಪ್ರಕಾರ, ರಾಷ್ಟ್ರಪತಿಯವರ ಅಂಕಿತ ಬಿದ್ದ ನಂತರ ಆರು ತಿಂಗಳಲ್ಲಿ ಕಾಯ್ದೆಗೆ ನಿಯಮಗಳನ್ನು ರೂಪಿಸಬೇಕು. ಆದರೆ, ಕೇಂದ್ರ ಗೃಹ ಸಚಿವಾಲಯವು ಸಿಎಎ ಜಾರಿ ಸಂಬಂಧ ನಿಯಮ ರೂಪಿಸುವುದನ್ನು ಮುಂದೂಡುತ್ತಾ ಹೋಯಿತು. ನಾಲ್ಕು ವರ್ಷ ಮೂರು ತಿಂಗಳ ಅಂತರದಲ್ಲಿ ಹೀಗೆ ಒಂಬತ್ತು ಬಾರಿ ಮುಂದೂಡಿದ ನಂತರ, ಚುನಾವಣೆ ಘೋಷಣೆಗೆ ಐದು ದಿನ ಮುಂಚಿತವಾಗಿ ಸಿಎಎ ನಿಯಮಗಳ ಅಧಿಸೂಚನೆ ಪ್ರಕಟಿಸಿತು. ಸಿಎಎ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗಲೇ ಅದನ್ನು ವಿರೋಧಿಸಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಹಲವು ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಸಿಎಎ ಅನುಮೋದನೆಗೊಂಡ ನಂತರ ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ಥಾನ, ತಮಿಳುನಾಡು ಸರ್ಕಾರಗಳು ಅದನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದವು. ಈಗ, ಸಿಎಎ ನಿಯಮಗಳ ಅಧಿಸೂಚನೆ ಪ್ರಕಟವಾದ ನಂತರ, ವಿವಿಧ ಪಕ್ಷಗಳು ಹೇಗೆ ಪ್ರತಿಕ್ರಿಯಿಸಿವೆ ಎಂಬುದರಲ್ಲಿಯೇ ಚುನಾವಣೆಯಲ್ಲಿ ಅದು ಯಾವ ಪಾತ್ರ ವಹಿಸಲಿದೆ ಎಂಬುದರ ಸೂಚನೆಗಳಿವೆ. ‘ಮುಸ್ಲಿಮರು ಆತಂಕ ಪಡಬೇಕಿಲ್ಲ. ಸಿಎಎ ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ. ಪೌರತ್ವ ನೀಡುವ ಕಾಯ್ದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸಿಎಎ ಜಾರಿಯನ್ನು ಸ್ವಾಗತಿಸಿದ್ದಾರೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸರ್ಕಾರಗಳು ಸಿಎಎ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿಯೂ ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ನಂತರ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ‘ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಯನ್ನು ತಡೆಯಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಸಿಎಎ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಪ್ರಮುಖವಾದುದು. ಸಿಎಎ ಜಾರಿ ವಿಚಾರವು 2021ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯ ಮುಖ್ಯ ಅಸ್ತ್ರವಾಗಿತ್ತು. ಮಾರ್ಚ್ 11ರಂದು ಸಿಎಎ ಅಧಿಸೂಚನೆ ಪ್ರಕಟವಾದ ತಕ್ಷಣವೇ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಶಂತನು ಠಾಕೂರ್, ‘ಬಿಜೆಪಿಗೆ ಇದು ಲೋಕಸಭಾ ಚುನಾವಣೆಯಲ್ಲಿ ನೆರವಾಗಲಿದ್ದು, ಪಶ್ಚಿಮ ಬಂಗಾಳದ 10–12 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲು ಸಹಕಾರಿಯಾಗಲಿದೆ’ ಎಂದಿದ್ದರು. ಶಂತನು ಠಾಕೂರ್, ಮಾತುವಾ ಸಮುದಾಯಕ್ಕೆ ಸೇರಿದವರು. 1950ರ ನಂತರ ಪೂರ್ವ ಪಾಕಿಸ್ತಾನ– ಈಗಿನ ಬಾಂಗ್ಲಾ ದೇಶದಿಂದ– ಭಾರತಕ್ಕೆ ವಲಸೆ ಬಂದಿರುವ ಮಾತುವಾ ಸಮುದಾಯವು ಪಶ್ಚಿಮ ಬಂಗಾಳದ ಪರಿಶಿಷ್ಟ ಜಾತಿಯ ಸಮುದಾಯಗಳ ಪೈಕಿ ಪ್ರಮುಖವಾದುದಾಗಿದೆ. ಸುಮಾರು ಮೂವತ್ತು ಲಕ್ಷ ಜನಸಂಖ್ಯೆಯ ಮಾತುವಾ ಸಮುದಾಯವು ಪಶ್ಚಿಮ ಬಂಗಾಳದ ನಾದಿಯಾ ಮತ್ತು ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಸಿಎಎ ಅಧಿಸೂಚನೆ ಪ್ರಕಟವಾದ ನಂತರ ಸಂತಸದಿಂದ ಕುಣಿದಾಡಿದ್ದ ಮಾತುವಾ ಸಮುದಾಯದ ಮುಖಂಡರು, ‘ಇದು ಎರಡನೇ ಸ್ವಾತಂತ್ರೋತ್ಸವದ ದಿನ’ ಎಂದು ಕೊಂಡಾಡಿದ್ದರು. ಕೆಲವೇ ದಿನಗಳಲ್ಲಿ ಅವರ ಸಂಭ್ರಮದ ಉಬ್ಬರ ಇಳಿದಿದ್ದು, ಇದೀಗ ಅವರ ನಿಲುವು ಬದಲಾಗಿದೆ. ಸಿಎಎ ಅಡಿ ನೋಂದಣಿ ಮಾಡಿಕೊಳ್ಳಲು ತಮ್ಮಲ್ಲಿ ಅಗತ್ಯ ದಾಖಲೆಗಳು ಇಲ್ಲ ಎನ್ನುವುದು ಅವರ ಚಿಂತೆಯಾಗಿದೆ. ಆದ್ದರಿಂದ ಲೋಕಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗುವವರೆಗೆ ಯಾರೂ ಪೌರತ್ವ ನೋಂದಣಿ ಮಾಡಿಕೊಳ್ಳಬಾರದು ಎಂದು ಅಖಿಲ ಭಾರತ ಮಾತುವಾ ಮಹಾಸಭಾ ಕರೆ ನೀಡಿದೆ. ಇದೇ ಸಮುದಾಯಕ್ಕೆ ಸೇರಿದ ಟಿಎಂಸಿಯ ಮಮತಾಬಾಲ ಠಾಕೂರ್, ಮಾತುವಾಗಳು ತಮ್ಮ ಪೌರತ್ವವನ್ನು ಮತ್ತೆ ಸಾಬೀತು‍ಪಡಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ಸಿಎಎ ವಿರೋಧದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನನ್ನ ಜೀವ ಇರುವವರೆಗೆ ಒಬ್ಬರೇ ಒಬ್ಬರ ಪೌರತ್ವವನ್ನು ಯಾರೂ ಕಿತ್ತುಕೊಳ್ಳಲು ಬಿಡುವುದಿಲ್ಲ’ ಎಂದು ಘೋಷಿಸಿದ್ದಾರೆ. ಕೇರಳದಲ್ಲಿ ಸಿಎಎ ವಿರೋಧಿಸಿ ರ‍್ಯಾಲಿಗಳು ನಡೆಯುತ್ತಿವೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಈ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ‘ಸಿಎಎ ಜಾರಿಗೊಳಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಹಿಂದೂ ಮಹಾಸಭಾದ ದ್ವಿರಾಷ್ಟ್ರ ಸಿದ್ಧಾಂತವನ್ನು ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ. ಭಾರತದ ಒಳಗೆ ಮಾತ್ರವಲ್ಲ, ಹೊರಗಿನಿಂದಲೂ ಸಿಎಎಗೆ ವಿರೋಧ ವ್ಯಕ್ತವಾಗಿದೆ. ಮುಸ್ಲಿಮರ ಮೇಲೆ ಪರಿಣಾಮ ಬೀರಬಹುದಾದ ಸಿಎಎ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ್ದರ ಬಗ್ಗೆ ಅಮೆರಿಕ ವಿದೇಶಾಂಗ ಸಚಿವಾಲಯವು ಕಳವಳ ವ್ಯಕ್ತಪಡಿಸಿತ್ತು. ಅಮೆರಿಕವು ತಪ್ಪು ಮಾಹಿತಿಯ ಪರಿಣಾಮವಾಗಿ ಅನಗತ್ಯ ಹೇಳಿಕೆ ನೀಡಿದೆ ಎಂದು ಭಾರತ ಸರ್ಕಾರ ಪ್ರತಿಕ್ರಿಯಿಸಿತ್ತು. ಬಿಜೆಪಿಯವರ ಅತ್ಯುತ್ಸಾಹ, ಸಂಭ್ರಮ, ವಿರೋಧ ಪಕ್ಷಗಳ ಆತಂಕ, ಅನುಮಾನಗಳ ಸುತ್ತ ರಾಜಕೀಯದ ಕ್ರಿಯೆ–ಪ್ರತಿಕ್ರಿಯೆಗಳು ತೀವ್ರತೆ ಪಡೆದುಕೊಳ್ಳುತ್ತಿವೆ. ಸಿಎಎ ಜಾರಿಯಾಗುತ್ತದೆಯೇ, ಅದರ ಸ್ವರೂಪ ಹೇಗಿರಲಿದೆ ಎನ್ನುವ ಪ್ರಶ್ನೆಗಳಿಗೆ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಉತ್ತರ ಸಿಗಲಿದೆ. ಆತ್ಮಹತ್ಯೆ ಸುತ್ತ ರಾಜಕೀಯ ಸಮರ ಕೋಲ್ಕತ್ತದಲ್ಲಿ 37 ವರ್ಷದ ತಪನ್‌ಸೇನ್ ಗುಪ್ತಾ ಮಾರ್ಚ್ 21ರಂದು ಆತ್ಮಹತ್ಯೆ ಮಾಡಿಕೊಂಡರು. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ರಾಜ್ಯಸಭಾ ಸದಸ್ಯ ನದೀಮುಲ್ ಹಖ್ ಸೇರಿದಂತೆ ಪಶ್ಚಿಮ ಬಂಗಾಳದ ಹಲವು ಸಚಿವರು ಅವರ ಮನೆಗೆ ಭೇಟಿ ನೀಡಿದ್ದರು. ‘ಸಿಎಎ ಘೋಷಣೆಯಾದಾಗಿನಿಂದ ತನ್ನ ಮಗ ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ’ ಎಂದು ಮೃತನ ತಂದೆ ದೇಬಶಿಶ್ ಸೇನ್ ಗುಪ್ತಾ ಹತ್ತಿರದ ನೇತಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಯಾದರೆ ತನ್ನ ಭವಿಷ್ಯವೇನು ಎಂಬುದರ ಬಗ್ಗೆ ತಪನ್‌ಸೇನ್ ಆತಂಕಗೊಂಡಿದ್ದ ಎಂದು ಮೃತನ ಸಂಬಂಧಿಗಳು ತಿಳಿಸಿದ್ದರು. ಈ ಪ್ರಕರಣವು ಟಿಎಂಸಿ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.