ಲೋಕಸಭೆ ಚುನಾವಣೆಯಲ್ಲಿ ನಿರುದ್ಯೋಗವೇ ನಿರ್ಣಾಯಕ ವಿಷಯ: ಖರ್ಗೆ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವಜನರ ನಿರುದ್ಯೋಗ ಸಮಸ್ಯೆಯೇ ನಿರ್ಣಾಯಕ ವಿಷಯ. ಇದನ್ನು ನಿಭಾಯಿಸಲು ತನ್ನಲ್ಲಿ ಸೂಕ್ತ ಯೋಜನೆ ಇದೆ ಎಂದು ಕಾಂಗ್ರೆಸ್‌ ಬುಧವಾರ ಹೇಳಿದೆ. ಮೋದಿ ಸರ್ಕಾರದ ಉದಾಸೀನತೆಯ ಭಾರವನ್ನು ಯುವಜನರು ಹೊತ್ತುಕೊಂಡಿದ್ದು, ದೇಶವು ನಿರುದ್ಯೋಗದ ‘ಟೈಮ್‌ ಬಾಂಬ್‌’ ಮೇಲೆ ಕುಳಿತಿದೆ ಎಂದು ವಿಪಕ್ಷವು ಪ್ರತಿಪಾದಿಸಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮತ್ತು ಮಾನವ ಅಭಿವೃದ್ಧಿ ಸಂಸ್ಥೆ (ಐಎಚ್‌ಡಿ) ಬಿಡುಗಡೆ ಮಾಡಿರುವ ‘ಭಾರತದ ಉದ್ಯೋಗ ವರದಿ 2024’ ಅನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ 20 ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಯುವಜನರಿಂದ 12 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಕಸಿದುಕೊಂಡಿದ್ದಾರೆ. ‌ಇದನ್ನು ಮತಚಲಾಯಿಸುವ ಮೊದಲು ಜನರು ನೆನಪಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ‘ನಮ್ಮ ಯುವಕರು ಮೋದಿ ಸರ್ಕಾರದ ದಯನೀಯ ಉದಾಸೀನತೆಯ ಭಾರವನ್ನು ಹೊತ್ತಿದ್ದಾರೆ. ನಿರಂತರವಾಗಿ ಹೆಚ್ಚುತ್ತಿರುವ ನಿರುದ್ಯೋಗವು ಅವರ ಭವಿಷ್ಯವನ್ನು ನಾಶಪಡಿಸಿದೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಭೀಕರವಾಗಿದೆ ಎಂಬುದನ್ನು ಐಎಲ್‌ಒ ಮತ್ತು ಐಎಚ್‌ಡಿ ನಿರ್ಣಾಯಕ ವರದಿಯೂ ಹೇಳಿದೆ’ ಎಂದು ಖರ್ಗೆ ಹೇಳಿದ್ದಾರೆ. ‘ನಾವು ನಿರುದ್ಯೋಗದ ‘ಟೈಮ್‌ ಬಾಂಬ್‌’ ಮೇಲೆ ಕುಳಿತಿದ್ದೇವೆ’ ಎಂದು ಖರ್ಗೆ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಆದರೆ, ಮೋದಿ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು ನಿರುದ್ಯೋಗದಂತಹ ಎಲ್ಲಾ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಸರ್ಕಾರವು ಪರಿಹರಿಸಲು ಸಾಧ್ಯವಿಲ್ಲವೆಂದು ಹೇಳುವ ಮೂಲಕ ನೆಚ್ಚಿನ ನಾಯಕನನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ’ ಎಂದು ಟೀಕಿಸಿದ್ದಾರೆ. ನಿರುದ್ಯೋಗಿ ಭಾರತೀಯರಲ್ಲಿ ಶೇ.83ರಷ್ಟು ಯುವಕರು. ಗ್ರಾಮೀಣ ಪ್ರದೇಶದಲ್ಲಿ ಶೇ.17.5ರಷ್ಟು ಯುವಕರು ಮಾತ್ರ ನಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆಂದು ಐಎಲ್‌ಒ ವರದಿ ಹೇಳಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ, ಉದ್ಯೋಗಗಳ ತೀವ್ರ ಕೊರತೆಯಿಂದಾಗಿ ಕಡಿಮೆ ಯುವಜನರು ಮೋದಿ ಆಡಳಿತದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2012ಕ್ಕೆ ಹೋಲಿಸಿದರೆ, ಮೋದಿ ಸರ್ಕಾರದಲ್ಲಿ ಯುವಕರ ನಿರುದ್ಯೋಗವು ಮೂರು ಪಟ್ಟು ಹೆಚ್ಚಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ‘ಯುವ ನ್ಯಾಯ’ ಘೋಷಿಸಿದೆ ಎಂದು ಖರ್ಗೆ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.