ಕೇಜ್ರಿವಾಲ್ ಪರ ರ್‍ಯಾಲಿ: ‘ಇಂಡಿಯಾ’ ಕೂಟಕ್ಕೆ ಸುವರ್ಣಾವಕಾಶ? ನವದೆಹಲಿ: ಅಬಕಾರಿ ಹಗರಣದ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ವಿರೋಧಿಸಿ ಮಾರ್ಚ್ 31ರಂದು ಪ್ರತಿಷ್ಠಿತ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ರ್‍ಯಾಲಿಯು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಕೂಟದ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಎನ್ನುವಂಥ ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಳೆದ ಅಕ್ಟೋಬರ್‌ನಿಂದಲೂ ‘ಇಂಡಿಯಾ’ ಕೂಟದಲ್ಲಿರುವ ಪಕ್ಷಗಳು ಒಂದೆಡೆ ಸೇರಬೇಕೆಂದು ಚಿಂತನೆ ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಈ ಹಿಂದೆ ಪರಸ್ಪರ ಮನಸ್ತಾಪ ಹೊಂದಿದ್ದು, ಈಗ ಮೈತ್ರಿಯ ಭಾಗವಾಗಿರುವ ಪಕ್ಷಗಳು ಅಂದು ಒಂದೇ ವೇದಿಕೆಯಲ್ಲಿ ಸೇರಲಿವೆ. ಜತೆಗೆ ದೆಹಲಿಯಲ್ಲಿ ಎಎಪಿ–ಕಾಂಗ್ರೆಸ್‌ ಜಂಟಿ ಪ್ರಚಾರಕ್ಕೆ ಅದೇ ಕಾರ್ಯಕ್ರಮ ವೇದಿಕೆಯಾಗಲಿದೆ. ತಮ್ಮ ಜಂಟಿ ಹೇಳಿಕೆಗಳಲ್ಲಿ ಹಲವು ಬಾರಿ ಪ್ರತಿಪಾದಿಸಿದರೂ ‘ಇಂಡಿಯಾ’ ಕೂಟಕ್ಕೆ ಇದುವರೆಗೆ ಒಂದೇ ಒಂದು ರ್‍ಯಾಲಿ ನಡೆಸಲು ಸಾಧ್ಯವಾಗಿರಲಿಲ್ಲ. ಹಿಂದೊಮ್ಮೆ ಭೋಪಾಲ್‌ನಲ್ಲಿ ರ್‍ಯಾಲಿ ನಡೆಸುವುದಾಗಿ ಪ್ರಕಟಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅದನ್ನು ಏಕಪಕ್ಷೀಯವಾಗಿ ರದ್ದುಪಡಿಸಿದ್ದರು. ಕೆಲವು ರಾಜ್ಯಗಳಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಿಸಿದ ಮನಸ್ತಾಪ (ನಿದರ್ಶನಕ್ಕೆ ಪಶ್ಚಿಮ ಬಂಗಾಳ) ಇದ್ದಿದ್ದರಿಂದ ಜಂಟಿ ಕಾರ್ಯಕ್ರಮಗಳನ್ನು ಆಯೋಜಿಸಲು ಅಡ್ಡಿ ಉಂಟಾಗಿತ್ತು. ಇದೇ ತಿಂಗಳಲ್ಲಿ ಕನಿಷ್ಠ ಅಂಥ ಎರಡು ರ್‍ಯಾಲಿಗಳನ್ನು ಕೆಲವು ಮಿತ್ರಪಕ್ಷಗಳು ತಪ್ಪಿಸಿಕೊಂಡಿವೆ. ಪಟ್ನಾದಲ್ಲಿ ಆರ್‌ಜೆಡಿ ಆಯೋಜಿಸಿದ್ದ ರ್‍ಯಾಲಿ ಮತ್ತು ರಾಹುಲ್ ಗಾಂಧಿಯವರ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಕೊನೆಯಲ್ಲಿ ಮುಂಬೈನಲ್ಲಿ ಆಯೋಜಿಸಲಾಗಿದ್ದ ರ್‍ಯಾಲಿಗೆ ಅಂಥ ಸಾಧ್ಯತೆಗಳಿದ್ದವು. ಕೇಜ್ರಿವಾಲ್ ದೇಶದಾದ್ಯಂತ ಹೆಸರಾಗಿರುವುದರಿಂದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಇಂಡಿಯಾ ಕೂಟದ ಮಿತ್ರಪಕ್ಷಗಳಿಗೆ ಇದು ಸೂಕ್ತ ಸಮಯದಂತೆ ಒದಗಿಬಂದಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಬಂಧನ ಪ್ರಕರಣಕ್ಕಿಂತ ಭಿನ್ನವಾಗಿರುವ ಕೇಜ್ರಿವಾಲ್ ಬಂಧನ ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಲೋಕಸಭಾ ಚುನಾವಣೆ ಘೋಷಣೆಯಾದ ನಂತರದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿರುವುದರ ವಿರುದ್ಧವಾಗಿ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎನ್ನುವ ಭಾವನೆ ‘ಇಂಡಿಯಾ’ ಕೂಟದಲ್ಲಿದೆ. ತಮ್ಮ ಕಾರ್ಯಕರ್ತರು ಮೈತ್ರಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವುದನ್ನು ತಿಳಿಯಲು ಕಾಂಗ್ರೆಸ್ ಹಾಗೂ ಎಎಪಿಗೆ ರ್‍ಯಾಲಿ ಒಂದು ಉತ್ತಮ ಅವಕಾಶವಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಮೈತ್ರಿಯ ತೊಡಕುಗಳನ್ನು ಗುರುತಿಸಿ, ಅವನ್ನು ಪರಿಹರಿಸಿಕೊಳ್ಳುವ ದಿಸೆಯಲ್ಲಿ ಕೂಡ ಮುಖಂಡರಿಗೆ ಇದೊಂದು ಅವಕಾಶವಾಗಿದೆ. ಕೇಜ್ರಿವಾಲ್ ಬಂಧನವು ‘ಇಂಡಿಯಾ’ ಮಿತ್ರ ಪಕ್ಷಗಳಿಗೆ ಒಗ್ಗಟ್ಟಿನ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದೆ. ಇದಕ್ಕೆ ನಿದರ್ಶನವೆಂದರೆ, ಎಎಪಿಯ ತೀವ್ರ ದಾಳಿಗಳನ್ನು ಎದುರಿಸಿದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ, ಮಾಜಿ ಸಂಸದ ಸಂದೀಪ್ ದೀಕ್ಷಿತ್ ಕೇಜ್ರಿವಾಲ್ ಬಂಧನದ ಸುದ್ದಿ ತಿಳಿದ ತಕ್ಷಣ ಅವರ ನಿವಾಸಕ್ಕೆ ಧಾವಿಸಿದವರಲ್ಲಿ ಮೊದಲಿಗರಾಗಿದ್ದರು. ಸದ್ಯದ ಮಟ್ಟಿಗೆ, ಪ್ರತಿಭಟನಾ ಸ್ಥಳವನ್ನು ಎಲ್ಲರೂ ಬಂದು ಮುಟ್ಟುವರೇ ಎನ್ನುವುದು ಎಎಪಿ, ಕಾಂಗ್ರೆಸ್ ಸೇರಿದಂತೆ ಸಂಘಟಕರ ದೊಡ್ಡ ಆತಂಕವಾಗಿದೆ. ‘ಮಾರ್ಚ್ 31ರ ರ್‍ಯಾಲಿಯು ಅತ್ಯಂತ ಮಹತ್ವದ್ದಾಗಿದೆ. ಅದು ಹೇಗೆ ನಡೆಯುತ್ತದೆ ಎನ್ನುವುದರ ಮೇಲೆ ನಮ್ಮ ಮುಂದಿನ ಯಶಸ್ಸು ನಿಂತಿದೆ. ಆದರೆ, ನಮಗೆ ಖಚಿತವಾಗಿ ಅನ್ನಿಸುವುದೇನೆಂದರೆ, ಮೋದಿ ಸರ್ಕಾರವು ಜನ ಸುಲಭವಾಗಿ ಪ್ರತಿಭಟನಾ ಸ್ಥಳ ಸೇರಲಾಗದಂತೆ ಅಡ್ಡಿಪಡಿಸುತ್ತದೆ’ ಎಂದು ‘ಇಂಡಿಯಾ’ ಕೂಟದ ಮುಖಂಡರೊಬ್ಬರು ಹೇಳಿದರು. ಈ ಹಿನ್ನೆಲೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಪ್ರತ್ಯೇಕ ಸಿದ್ಧತೆಗಳನ್ನು ನಡೆಸುತ್ತಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.