ಕ್ಷೇತ್ರ ಮಹಾತ್ಮೆ: ಬಸಿರ್‌ಹಾಟ್, ಪಶ್ಚಿಮ ಬಂಗಾಳ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಗೆಲುವಿನ ಕ್ಷೇತ್ರವೆಂದೇ ಬಿಂಬಿತವಾಗಿರುವ ಪಶ್ಚಿಮ ಬಂಗಾಳದ ಬಸಿರ್‌ಹಾಟ್ ಲೋಕಸಭಾ ಕ್ಷೇತ್ರವು, ಈ ಬಾರಿ ಬಿಜೆಪಿ ಅಭ್ಯರ್ಥಿಯು ಕಣಕ್ಕಿಳಿಯುುವುದರೊಂದಿಗೆ ರೋಚಕ ಹಣಾಹಣಿಗೆ ಸಿದ್ಧವಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ನಡೆದ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ರೇಖಾ ಪಾತ್ರ ಅವರು ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಸಂದೇಶ್‌ಖಾಲಿಯು ಇದೇ ಲೋಕಸಭಾ ಕ್ಷೇತ್ರದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯನ್ನು ಹಣಿಯಲು ಯತ್ನಿಸುತ್ತಿರುವ ಬಿಜೆಪಿಗೆ ಸಂದೇಶ್‌ಖಾಲಿ ಪ್ರಕರಣವು ಬ್ರಹ್ಮಾಸ್ತ್ರವಾಗಿದೆ. ರೇಖಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಶಕ್ತಿ ಸ್ವರೂಪ’ ಎಂದು ಬಣ್ಣಿಸಿದ್ದರು. ಟಿಎಂಸಿಯು ಈ ಬಾರಿ ಪ್ರಮುಖ ಮುಸ್ಲಿಂ ಮುಖಂಡ ಹಾಜಿ ನೂರುಲ್‌ ಇಸ್ಲಾಂ ಅವರನ್ನು ಇಲ್ಲಿಂದ ಅಖಾಡಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ನುಸ್ರತ್‌ ಜಹಾನ್‌ ಅವರ ಬದಲಿಗೆ ಹಾಜಿ ಅವರಿಗೆ ಟಿಕೆಟ್‌ ನೀಡಲಾಗಿದೆ. ರಾಜಕಾರಣದ ಜೊತೆಗೆ ಉದ್ಯಮಿಯೂ ಆಗಿರುವ ನೂರುಲ್‌ ಇಸ್ಲಾಂ ಅವರು ಸ್ಥಳೀಯವಾಗಿ ಸಾಕಷ್ಟು ಪ್ರಭಾವ ಹೊಂದಿರುವ ಮುಖಂಡರಾಗಿದ್ದಾರೆ. ಈ ಬಾರಿ ಸಿಪಿಎಂ ಕೂಡ ಮಾಜಿ ಶಾಸಕ ನಿರಪಾದ್‌ ಸರ್ದಾರ್‌ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಟಿಎಂಸಿಯಿಂದ ಅಮಾನತುಗೊಂಡಿರುವ ಮುಖಂಡ ಶಾಜಹಾನ್ ಶೇಖ್ ಮತ್ತು ಬೆಂಬಲಿಗರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಿದವರಲ್ಲಿ ರೇಖಾ ಪಾತ್ರಾ ಮುಂಚೂಣಿಯಲ್ಲಿದ್ದರು. ಈ ಪ್ರಕರಣದ ಬಳಿಕ ಸ್ಥಳೀಯರು ಟಿಎಂಸಿ ವಿರುದ್ಧ ತಿರುಗಿಬಿದ್ದಿದ್ದರು. ಈ ಬೆಳವಣಿಗೆಯು ಬಿಜೆಪಿ ಅಭ್ಯರ್ಥಿಯಲ್ಲಿ ಗೆಲುವಿನ ನಿರೀಕ್ಷೆ ಹುಟ್ಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.