ಟ್ಯಾಟೂ ಅಳಿಸಿ: ಒಡಿಶಾ ಪೊಲೀಸ್‌ ಇಲಾಖೆ ಸೂಚನೆ ಭುವನೇಶ್ವರ: ದೇಹದ ಮೇಲಿರುವ ಟ್ಯಾಟೂವನ್ನು (ಹಚ್ಚೆ) 15 ದಿನಗಳ ಒಳಗಾಗಿ ಅಳಿಸಿಹಾಕುವಂತೆ ವಿಶೇಷ ಭದ್ರತಾ ತುಕಡಿಯ ಸಿಬ್ಬಂದಿಗೆ ಒಡಿಶಾ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಟ್ಯಾಟೂ ಹಾಕಿಸಿಕೊಳ್ಳುವುದು ಅಸಭ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಅದು ಹೇಳಿದೆ. ಭುವನೇಶ್ವರದ ಉಪ ಪೊಲೀಸ್‌ ಆಯಕ್ತರು (ಭದ್ರತೆ) ಮಂಗಳವಾರದಿಂದಲೇ ಆದೇಶವನ್ನು ಜಾರಿಗೊಳಿಸಿದ್ದಾರೆ. ಸುಲಭವಾಗಿ ಜನರ ಗಮನಕ್ಕೆ ಬರುವಂತೆ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿರುವವರ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ‘ಹಲವರು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದರಿಂದ ಪೊಲೀಸ್‌ ಇಲಾಖೆಯ ಗೌರವಕ್ಕೆ ಧಕ್ಕೆಯಾಗುತ್ತಿದೆ. ಇದು ಅಪರಾಧ, ಅಸಭ್ಯ. ಹೀಗಾಗಿ ಸಮವಸ್ತ್ರ ಧರಿಸಿದ ಮೇಲೂ ಜನರಿಗೆ ಕಾಣಿಸುವಂತಹ ಹಚ್ಚೆ ಹಾಕಿಸಿಕೊಳ್ಳುವುದನ್ನು ನಿಷೇಧಿಸಲಾಗುತ್ತಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶ ಉಲ್ಲಂಘನೆಯಾದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಡಿ ಎಂದು ಡಿಸಿಪಿ ಸಲಹೆ ನೀಡಿದ್ದಾರೆ. ವಿಶೇಷ ಭದ್ರತಾ ಪಡೆಯನ್ನು ಮುಖ್ಯಮಂತ್ರಿಗಳ ನಿವಾಸ, ರಾಜಭವನ, ರಾಜ್ಯ ಕಾರ್ಯದರ್ಶಿ, ಒಡಿಶಾ ವಿಧಾನಸಭೆಗಳಲ್ಲಿ ನಿಯೋಜಿಸಲಾಗಿರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.