ದೆಹಲಿ ಅಬಕಾರಿ ನೀತಿ ಪ್ರಕರಣ: ಸಚಿವ ಕೈಲಾಶ್ ಗೆಹಲೋತ್‌ಗೆ ಸಮನ್ಸ್ ನೀಡಿದ ಇ.ಡಿ ನವದೆಹಲಿ: ದೆಹಲಿ ಸರ್ಕಾರ 'ಅಬಕಾರಿ ನೀತಿ' ಜಾರಿಗೊಳಿಸಿದ್ದ ವೇಳೆ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಾರಿಗೆ ಸಚಿವ ಕೈಲಾಶ್‌ ಗೆಹಲೋತ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ನೀಡಿದೆ. ಈ ಬಗ್ಗೆ ಸುದ್ದಿ ಸಂಸ್ಥೆ 'ಪಿಟಿಐ' ವರದಿ ಮಾಡಿದೆ. ಇದೇ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಳುಹಿಸಿದ್ದ ಸಮನ್ಸ್‌ಗಳನ್ನು ಪದೇ ಪದೇ ನಿರ್ಲಕ್ಷಿಸಿದ್ದ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು, ಇ.ಡಿ ಫೆಬ್ರುವರಿ 21ರಂದು ಬಂಧಿಸಿದೆ. ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್‌ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿರುವ ದೆಹಲಿ ಹೈಕೋರ್ಟ್‌, ಏಪ್ರಿಲ್‌ 1ರ ವರೆಗೆ ಇ.ಡಿ ವಶಕ್ಕೆ ನೀಡಿದೆ. ಕೇಜ್ರಿವಾಲ್‌ ಬಂಧನ ಖಂಡಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾರ್ಚ್‌ 31ರಂದು 'ಮಹಾರ‍್ಯಾಲಿ' ನಡೆಸಲು ಎಎಪಿ ಸಿದ್ಧತೆ ನಡೆಸಿದೆ. ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ಪ್ರಮುಖ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಶರದ್‌ ಪವಾರ್‌, ಉದ್ಧವ್‌ ಠಾಕ್ರೆ, ಅಖಿಲೇಶ್‌ ಯಾದವ್‌ ಮತ್ತು ತೇಜಸ್ವಿ ಯಾದವ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಗೋಪಾಲ್‌ ರಾಯ್‌ ತಿಳಿಸಿದ್ದಾರೆ. ರ‍್ಯಾಲಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದಿದ್ದೇವೆ. ಸುಮಾರು 20,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದೂ ಅವರು ಹೇಳಿದ್ದಾರೆ. | : : ://./dhZlCa5NPF ../4xJY8nEujk ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.