ಗುಜರಾತ್‌: ಟಿಕೆಟ್‌ ಹಂಚಿಕೆಗೆ ಅಸಮಾಧಾನ, ಬಿಜೆಪಿ ಕಾರ್ಯಕರ್ತರ ಹೊಡೆದಾಟ ಅಹಮದಾಬಾದ್: ಗುಜರಾತ್‌ನ ಅಮ್ರೇಲಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡು ಎರಡು ಬಣಗಳ ಮಧ್ಯೆ ಶನಿವಾರ ರಾತ್ರಿ ಹೊಡೆದಾಟ ನಡೆದಿದೆ. ಕಾರ್ಯಕರ್ತರ ಹೊಡೆದಾಟದ ಬಗ್ಗೆ ಪಕ್ಷದ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಪಕ್ಷದ ಕಾರ್ಯಕರ್ತರು ಶನಿವಾರ ರಾತ್ರಿ ಪರಸ್ಪರ ಹೊಡೆದಾಡಿಕೊಂಡಿರುವುದು ನಿಜ. ಆದರೆ ಟಿಕೆಟ್‌ ಹಂಚಿಕೆಗೂ ಹೊಡೆದಾಟಕ್ಕೂ ಸಂಬಂಧವಿಲ್ಲ. ಪಕ್ಷದ ಆಂತರಿಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ’ ಎಂದು ಅಮ್ರೇಲಿ ಸಂಸದ ನಾರಣ್‌ ಕಛಾಡಿಯಾ ‘ಪ್ರಜಾವಾಣಿ’ಗೆ ತಿಳಿಸಿದರು. ಆದರೆ ಟಿಕೆಟ್‌ ಹಂಚಿಕೆ ವಿಚಾರವೇ ಜಗಳಕ್ಕೆ ಕಾರಣ ಎಂದು ಪಕ್ಷದ ಸ್ಥಳೀಯ ಮೂಲಗಳು ಹೇಳಿವೆ. ಬಿಜೆಪಿಯು ಅಮ್ರೇಲಿ ಕ್ಷೇತ್ರದಲ್ಲಿ ಭರತ್‌ ಸುತಾರಿಯಾ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಮೂರು ಬಾರಿ ಸಂಸದರಾಗಿದ್ದ ನಾರಣ್‌ ಕಛಾಡಿಯಾ ಅವರಿಗೆ ಟಿಕೆಟ್‌ ಕೈತಪ್ಪಿದೆ. ಪಕ್ಷದ ಹಿರಿಯ ನಾಯಕ ಭೂಪೇಂದ್ರ ಸಿನ್ಹ ಚುಡಾಸಮಾ ನೇತೃತ್ವದಲ್ಲಿ ಶನಿವಾರ ರಾತ್ರಿ ಕಾರ್ಯಕರ್ತರ ಸಭೆ ನಡೆದಿದೆ. ಅವರು ಸಭೆ ಮುಗಿಸಿ ಹೋದ ಬಳಿಕ ಎರಡು ಬಣಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಮಾತಿನ ಚಕಮಕಿ ಮತ್ತು ಹೊಡೆದಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸುತಾರಿಯಾ ಅವರಿಗೆ ಟಿಕೆಟ್‌ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಎದ್ದಿತ್ತು. ಅವರಿಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಅಮ್ರೇಲಿ ಜಿಲ್ಲೆಯ ಕೆಲವೆಡೆ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.