ಕಾಲೇಜು, ಆಸ್ಪತ್ರೆ ಅತಿಕ್ರಮಣ ಆರೋಪ: ಬಿಜೆಪಿ ಸಂಸದನ ವಿರುದ್ಧ ಎಫ್‌ಐಆರ್‌ ದೇವಘರ (ಜಾರ್ಖಂಡ್‌): ದೇವಘರ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಮೋಸದಿಂದ ಅತಿಕ್ರಮಿಸಿಕೊಂಡ ಆರೋಪದ ಮೇಲೆ ಬಿಜೆಪಿಯ ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಶನಿವಾರ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ‘ದುಬೆ ಮತ್ತು ಅವರ ಪತ್ನಿ ಬಾಬಾ ಬೈದ್ಯನಾಥ್ ಮೆಡಿಕಲ್ ಟ್ರಸ್ಟ್ ಮೂಲಕ ತಮ್ಮ ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನು ದುರುಪಯೋಗಡಿಸಿಕೊಂಡು ಹರಾಜು ಮೂಲಕ ಆಸ್ಪತ್ರೆಯನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಶಿವ ದತ್ತ ಶರ್ಮಾ ಎಂಬುವವರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ದೇವಘರ ಜಿಲ್ಲೆಯ ಜಸೀಡೀಹ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ‘ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಾಗಿ ನಾನು ₹ 93 ಕೋಟಿ ಸಾಲ ಮಾಡಿದ್ದೇನೆ. ಮೆಡಿಕಲ್ ಕೌನ್ಸಿಲ್ ಆಫ್‌ ಇಂಡಿಯಾದಿಂದ ಕಾಲೇಜಿಗೆ ಅನುಮೋದನೆ ಪಡೆಯಲು ವಿಫಲವಾದ ನಂತರ, ಈ ಸಾಲದ ಮೊತ್ತವನ್ನು ಬ್ಯಾಂಕ್‌ ನಿಷ್ಕ್ರಿಯ ಎಂದು ಘೋಷಿಸಿತು. ಈ ಸಂದರ್ಭದಲ್ಲಿ ನನ್ನನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲಿಕ್ಕಾಗಿ ಪಾಲುದಾರರನ್ನು ಹುಡುಕುವ ಭರವಸೆ ನೀಡಿದ ದುಬೆ, ನನ್ನಿಂದ ₹ 20 ಲಕ್ಷ ಪಡೆದಿದ್ದರು. ಆದರೆ, ಕಳೆದ ಡಿಸೆಂಬರ್‌ನಲ್ಲಿ ಕಾಲೇಜನ್ನು ಹರಾಜಿಗೆ ಹಾಕಿದ್ದಾರೆ. ಈ ಹರಾಜಿನಲ್ಲಿ ಬಾಬಾ ಬೈದ್ಯನಾಥ್‌ ಮೆಡಿಕಲ್‌ ಟ್ರಸ್ಟ್‌ ಒಂದೇ ಭಾಗಿಯಾಗಿತ್ತು’ ಎಂದು ಶರ್ಮಾ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ‘ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಮತ್ತು ಜೆಎಂಎಂ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನನ್ನ ವಿರುದ್ಧ ದಾಖಲಾದ 44ನೇ ಪ್ರಕರಣವಿದು. ಈ ವೈದ್ಯಕೀಯ ಕಾಲೇಜನ್ನು ಡಿಆರ್‌ಟಿ ನ್ಯಾಯಾಲಯದ ಹರಾಜಿನಲ್ಲಿ ಖರೀದಿಸಲಾಗಿದೆ. ಹೈಕೋರ್ಟ್ ಇದಕ್ಕೆ ಅನುಮತಿ ನೀಡಿದೆ. ನಾನು ಟ್ರಸ್ಟಿಯಲ್ಲ. ಬಿಜೆಪಿಯ ಸೈನಿಕ. ನನ್ನ ಮೇಲಿನ ಆರೋಪಗಳು ಸಾಬೀತಾದರೆ ರಾಜಕಾರಣದಿಂದ ನಿವೃತ್ತಿಯಾಗುವೆ’ ಎಂದು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ದುಬೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.