ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ಕಾಂಗ್ರೆಸ್: ಮೋದಿ ವಾಗ್ದಾಳಿ ನವದೆಹಲಿ: ಕಾಂಗ್ರೆಸ್‌ ಪಕ್ಷವು 1974ರಲ್ಲಿ ಕಚ್ಚತೀವು (ಪಾರ್ಕ್‌ ಸ್ಟ್ರೈಟ್‌) ದ್ವೀಪವನ್ನು ಶ್ರೀಲಂಕಾಕ್ಕೆ ಉದಾರವಾಗಿ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಭಾನುವಾರ ವಾಗ್ದಾಳಿ ನಡೆಸಿದರು. ‘ಕಾಂಗ್ರೆಸ್‌ ಹೇಗೆ ಕಚ್ಚತೀವು ದ್ವೀಪವನ್ನು ಬಿಟ್ಟುಕೊಟ್ಟಿದೆ ಎಂಬ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಇದು ಪ್ರತಿಯೊಬ್ಬ ಭಾರತೀಯನ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಕಾಂಗ್ರೆಸ್‌ ಅನ್ನು ಎಂದಿಗೂ ನಂಬಬಾರದು ಎಂಬ ಸಂಗತಿ ಜನರಿಗೆ ಗೊತ್ತಾಗಿದೆ’ ಎಂದು ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಅರ್ಜಿಗೆ ಆರ್‌ಟಿಐ ನೀಡಿದ್ದ ಉತ್ತರವನ್ನು ಉಲ್ಲೇಖಿಸಿ ಮೋದಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ‘75 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಭಾರತದ ಭಾವೈಕ್ಯ ಮತ್ತು ಹಿತಾಸಕ್ತಿಯನ್ನು ಕಡೆಗಣಿಸಿದೆ’ ಎಂದು ಆರೋಪಿಸಿದರು. ‘ಮೋದಿ ಸರ್ಕಾರವೇಕೆ ಮರಳಿ ಪಡೆಯಲಿಲ್ಲ’ ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಕಳೆದ 10 ವರ್ಷಗಳಲ್ಲಿ ಮೋದಿಯವರು ದ್ವೀಪವನ್ನು ಮರಳಿ ಪಡೆಯುವ ಪ್ರಯತ್ನವನ್ನು ಯಾಕೆ ಮಾಡಿಲ್ಲ? ಚುನಾವಣೆ ಸಮಯದಲ್ಲಿ ಸೂಕ್ಷ್ಮ ವಿಷಯಗಳನ್ನು ಮುನ್ಗೆಲೆಗೆ ತರುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ’ ಎಂದರು. ‘ಗಾಲ್ವನ್‌ ಕಣಿವೆಯಲ್ಲಿ ಭಾರತದ 20 ವೀರಯೋಧರು ಪ್ರಾಣಾರ್ಪಣೆ ಮಾಡಿದ ಬಳಿಕ ಪ್ರಧಾನಿ ಮೋದಿಯವರು ಚೀನಾಕ್ಕೆ ಯಾಕೆ ‘ಆರೋಪಮುಕ್ತ’ ಮಾಡಿದರು’ ಎಂದೂ ಪ್ರಶ್ನಿಸಿದರು. ‘1974ರ ಸ್ನೇಹಪರ ಒಪ್ಪಂದದ ಪ್ರಕಾರ ದ್ವೀಪವನ್ನು ಬಿಟ್ಟುಕೊಡಲಾಗಿದೆ. ಬಾಂಗ್ಲಾದೇಶದ ಜೊತೆಗೂ ಇದೇ ರೀತಿಯ ಸ್ನೇಹದ ಭಾವನೆಯನ್ನು ತೋರಲಾಗಿದೆ ಎಂಬುವುದನ್ನು ಮೋದಿ ಸರ್ಕಾರ ಮರೆಯಬಾರದು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.