ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವು: ಕ್ರಮಕ್ಕೆ ಎಫ್‌ಐಐಡಿಎಸ್‌ ಒತ್ತಾಯ ವಾಷಿಂಗ್ಟನ್‌: ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವುಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಭಾರತೀಯರ ಸಂಘಟನೆವೊಂದು, ಈ ವಿಚಾರವಾಗಿ ಕೂಡಲೇ ಪರಿಹಾರಾತ್ಮಕ ಕ್ರಮಕೈಗೊಳ್ಳುವಂತೆ ಸರ್ಕಾರ ಹಾಗೂ ಇತರ ಸಂಸ್ಥೆಗಳಿಗೆ ಮನವಿ ಮಾಡಿದೆ. ಫೌಂಡೇಷನ್‌ ಫಾರ್‌ ಇಂಡಿಯಾ ಅಂಡ್ ಇಂಡಿಯನ್ ಡಯಸ್ಪೋರಾ ಸ್ಟಡೀಸ್‌ (ಎಫ್‌ಐಐಡಿಎಸ್‌) ಎಂಬ ಸಂಘಟನೆಯು ಅಮೆರಿಕದ ವಿಶ್ವವಿದ್ಯಾಲಯಗಳು, ವಿದ್ಯಾರ್ಥಿ ಸಂಘಟನೆಗಳಿಗೂ ಈ ಮನವಿ ಮಾಡಿದೆ. ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವಿಗೆ, ಸಂಶಯಾಸ್ಪದ ಗುಂಡಿನ ದಾಳಿ ಮತ್ತು ಅಪಘಾತಗಳು, ಅಪಹರಣ, ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು, ಸುರಕ್ಷತೆ ಕುರಿತು ಅರಿವಿನ ಕೊರತೆ ಸೇರಿದಂತೆ ಹಲವಾರು ಕಾರಣಗಳನ್ನು ಎಫ್‌ಐಐಡಿಎಸ್‌ ಗುರುತಿಸಿದೆ. ಈ ವರ್ಷದ ಆರಂಭದಿಂದ, ಅಮೆರಿಕದಲ್ಲಿ ಭಾರತೀಯ ಮೂಲದ ಕನಿಷ್ಠ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ‘ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವಿನ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳವಾಗಿರುವುದು ಕಳವಳಕಾರಿ ಮಾತ್ರವಲ್ಲ, ಸಂಶಯ ಮೂಡಿಸುವಂತಿದೆ’ ಎಂದು ಬಾಸ್ಟನ್‌ನಲ್ಲಿ ವೈದ್ಯೆಯಾಗಿರುವ ಲಕ್ಷ್ಮಿ ಥಲಂಕಿ ಹೇಳುತ್ತಾರೆ. ಕ್ಲೀವ್‌ಲ್ಯಾಂಡ್‌, ಓಹಿಯೊ, ಇಲಿನಾಯ್ಸ್‌ ಹಾಗೂ ಇಂಡಿಯಾನಾ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಾವುಗಳು ವರದಿಯಾಗಿವೆ. ವಿದ್ಯಾರ್ಥಿಗಳ ಈ ಸಾವಿಗೆ ದ್ವೇಷವೇ ಪ್ರಮುಖ ಕಾರಣವಾಗಿರುವ ಸಾಧ್ಯತೆ ಇದೆ ಎಂಬ ವದಂತಿಗಳು ಭಾರತೀಯ ಅಮೆರಿಕನ್ನರಲ್ಲಿ ಹರಿದಾಡುತ್ತಿವೆ. ಎಫ್‌ಐಐಡಿಎಸ್‌ ಮುಂದಿಟ್ಟ ಸಲಹೆಗಳು * ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು * ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಕುರಿತು ದೂರುಗಳು ಬಂದಾಗ ಕೈಗೊಳ್ಳುವ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ಸುಧಾರಣೆ ತರಬೇಕು * ರ‍್ಯಾಗಿಂಗ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು * ಬೆದರಿಕೆ ಮತ್ತು ಸುರಕ್ಷತೆ ಕುರಿತು ಅರಿವು ಹೆಚ್ಚಿಸಬೇಕು * ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಸಂಬಂಧ ನೆರವು ನೀಡಬೇಕು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.