ಸೆಲೆಬ್ರಿಟಿ ಷೆಫ್ ಕುನಾಲ್ ಕಪೂರ್‌ ವಿಚ್ಛೇದನಕ್ಕೆ ದೆಹಲಿ ಹೈಕೋರ್ಟ್‌ ಅಸ್ತು ನವದೆಹಲಿ: ತಮ್ಮ ಪರಿತ್ಯಕ್ತ ಪತ್ನಿಯಿಂದ ಕ್ರೌರ್ಯ ಅನುಭವಿಸಿರುವ ಆಧಾರದ ಮೇಲೆ ಸೆಲೆಬ್ರಿಟಿ ಷೆಫ್ ಕುನಾಲ್ ಕಪೂರ್ ಅವರಿಗೆ ದೆಹಲಿ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ. ವಿಚ್ಛೇದನ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ಕುನಾಲ್ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಸಂಗಾತಿ ವಿರುದ್ಧ ಮಾನಹಾನಿಕರ ಹೇಳಿಕೆ, ಆಧಾರರಹಿತ ಆರೋಪ, ಅಪಮಾನವು ಕೌಟುಂಬಿಕ ಕ್ರೌರ್ಯಕ್ಕೆ ಸಮ ಎಂದು ಕೋರ್ಟ್ ಹೇಳಿದೆ. ಪ್ರಸ್ತುತ ಸಲ್ಲಿಸಲಾದ ಸತ್ಯಾಂಶಗಳ ಪ್ರಕಾರ, ಕುನಾಲ್ ವಿರುದ್ಧ ಪತ್ನಿ ನಡೆದುಕೊಂಡಿರುವ ರೀತಿಯು ಅವರ ಘನತೆ ಮತ್ತು ಸಹಾನುಭೂತಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಒಬ್ಬ ಸಂಗಾತಿ ಆ ರೀತಿ ನಡೆದುಕೊಂಡಾಗ ಮದುವೆ ಸಂಬಂಧಕ್ಕೆ ಅಪಮಾನವಾಗುತ್ತದೆ. ಹಾಗಿದ್ದಾಗ, ನೋವನ್ನು ಸಹಿಸಿಕೊಂಡು ದಂಪತಿಯಾಗಿ ಮುಂದುವರಿಯಲು ಯಾವುದೇ ಕಾರಣ ಉಳಿಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. 2008ರಲ್ಲಿ ವಿವಾಹವಾಗಿದ್ದ ಕುನಾಲ್ ದಂಪತಿಗೆ ಒಬ್ಬ ಪುತ್ರನಿದ್ದಾನೆ. ಪತ್ನಿ ನನ್ನ ಪೋಷಕರನ್ನು ಗೌರವದಿಂದ ಕಾಣುತ್ತಿಲ್ಲ ಮತ್ತು ನನ್ನನ್ನು ನಿರಂತರವಾಗಿ ಅಪಮಾನಿಸುತ್ತಿದ್ದಾರೆ ಎಂದು ಕುನಾಲ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.