ಮುಖಾಮುಖಿ: ಪತ್ತನಂತಿಟ್ಟ (ಕೇರಳ) ಕೇರಳದ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. 2009 ರಿಂದಲೂ ಇಲ್ಲಿ ಗೆಲ್ಲುತ್ತಾ ಬಂದಿರುವ ಆ್ಯಂಟೊ ಆ್ಯಂಟನಿ ಅವರನ್ನು ಪಕ್ಷವು ಈ ಬಾರಿಯೂ ಕಣಕ್ಕಿಳಿಸಿದೆ. ಆ್ಯಂಟೊ, ಸತತ ನಾಲ್ಕನೇ ಸಲ ಗೆಲುವಿನ ವಿಶ್ವಾಸದಲ್ಲಿದ್ದಾರೆ. 2019ರ ಚುನಾವಣೆಯಲ್ಲಿ ಅವರು ಸಿ‍ಪಿಎಂನ ವೀಣಾ ಜಾರ್ಜ್‌ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ 2021ರ ವಿಧಾನಸಭಾ ಚುನಾವಣೆಯಲ್ಲಿ ಪತ್ತನಂತಿಟ್ಟ ಜಿಲ್ಲೆಯ ಎಲ್ಲ ಐದೂ ಕ್ಷೇತ್ರಗಳನ್ನು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ತನ್ನದಾಗಿಸಿಕೊಂಡಿತ್ತು. ಆದ್ದರಿಂದ ಈ ಬಾರಿ ಆ್ಯಂಟೊ ಅವರಿಗೆ ಸಿಪಿಎಂ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಕಳೆದ ಮೂರು ಚುನಾವಣೆಗಳನ್ನು ಗಮನಿಸಿದರೆ, ಆ್ಯಂಟೊ ಅವರ ಗೆಲುವಿನ ಅಂತರ ತಗ್ಗುತ್ತಾ ಬಂದಿದೆ. ಇಲ್ಲಿನ ಮತದಾರರು ಮತ್ತೊಮ್ಮೆ ಅವರ ಕೈಹಿಡಿಯುವರೇ ಎಂಬುದನ್ನು ನೋಡಬೇಕು. ಪತ್ತನಂತಿಟ್ಟ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆಡಳಿತಾರೂಢ ಸಿಪಿಎಂ ಪಕ್ಷವು ಮಾಜಿ ಹಣಕಾಸು ಸಚಿವ ಟಿ.ಎಂ.ಥಾಮಸ್‌ ಐಸಾಕ್‌ ಅವರನ್ನು ಅಖಾಡಕ್ಕಿಳಿಸಿದೆ. ಈ ಹಿಂದಿನ ಎಲ್‌ಡಿಎಫ್‌ ಸರ್ಕಾರದಲ್ಲಿ ಎರಡು ಸಲ ಸಚಿವರಾಗಿದ್ದ ಅವರು ಹೊಂದಿರುವ ಅನುಭವವು ಮತಗಳನ್ನು ಸೆಳೆಯಬಹುದು ಎಂಬುದು ಸಿಪಿಎಂನ ಲೆಕ್ಕಾಚಾರ. ಈ ಹಿಂದೆ ಹಣಕಾಸು ಸಚಿವರಾಗಿದ್ದಾಗ ನಡೆದಿದ್ದ ಕೆಐಐಎಫ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಐಸಾಕ್‌ ಅವರಿಗೆ ಹಲವು ಸಲ ಸಮನ್ಸ್ ಜಾರಿಗೊಳಿಸಿತ್ತು. ಬಿಜೆಪಿಯು ಇಲ್ಲಿಂದ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್‌ ಕೆ.ಆ್ಯಂಟನಿ ಅವರನ್ನು ಕಣಕ್ಕಿಳಿಸಿದೆ. ಆದರೂ ಇಲ್ಲಿ ಆ್ಯಂಟೊ–ಐಸಾಕ್‌ ನಡುವೆ ನೇರ ಪೈಪೋಟಿ ನಡೆಯುವ ಸಾಧ್ಯತೆಯೇ ಅಧಿಕ. ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.