ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಪಿಎಂಕೆ ನಿರ್ಧಾರ ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿಗೆ ನಿರ್ಧರಿಸರುವುದಾಗಿ ತಮಿಳುನಾಡಿನ ಪಟ್ಟಾಲಿ ಮಕ್ಕಳ ಕಚ್ಚಿ(ಪಿಎಂಕೆ) ಪಕ್ಷವು ಘೋಷಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಚುನಾವಣಾ ಮೈತ್ರಿಗೆ ನಿರ್ಧರಿಸಿದ್ದೇವೆ. ಸೀಟು ಹಂಚಿಕೆ ಮತ್ತು ಅಭ್ಯರ್ಥಿಗಳ ಕುರಿತಾದ ವಿವರವನ್ನು ಪಿಎಂಕೆ ಸಂಸ್ಥಾಪಕ ಡಾ.ಎಸ್. ರಾಮದಾಸ್ ಘೋಷಿಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವಡಿವೇಲು ರಾವಣನ್ ತಿಳಿಸಿದ್ದಾರೆ. ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ರ್‍ಯಾಲಿ ನಡೆಸುತ್ತಿರುವ ಸಂದರ್ಭದಲ್ಲೇ ಎನ್‌ಡಿಎ ಜೊತೆಗಿನ ಮೈತ್ರಿ ಘೋಷಣೆ ಮಾಡುವ ಮೂಲಕ ಅಣ್ಣಾಡಿಎಂಕೆ ಜೊತೆಗಿನ ಸಖ್ಯ ತೊರೆದಿರುವುದಾಗಿ ವಣ್ಣಿಯಾರ್ ಸಮುದಾಯದ ಹಿಡಿತದಲ್ಲಿರುವ ಪಿಎಂಕೆ ಸಂದೇಶ ನೀಡಿದೆ. ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಅಣ್ಣಾಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ, ಪಿಎಂಕೆ ಮತ್ತು ಡಿಎಂಡಿಕೆ ಜೊತೆ ಮೈತ್ರಿಗೆ ಯತ್ನಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.