ಹೆಚ್ಚು ಓದಿದೆ; ಕುಟುಂಬದವರನ್ನು ನಗಿಸುತ್ತಿದ್ದೆ: ಎಎಪಿ ಸಂಸದ ಸಂಜಯ್‌ ಸಿಂಗ್‌ ನವದೆಹಲಿ: ‘ಆರಂಭದ 11 ದಿನ ಕಷ್ಟಕರವಾಗಿದ್ದವು. ಸಣ್ಣ ಕೊಠಡಿಯೊಳಗೆ ಬಂಧಿಯಾಗಿದ್ದೆ. ಹೊರಗೆ ಬಂದು, ತಿರುಗಾಡಲು ಅನುಮತಿಯಿರಲಿಲ್ಲ. ಸಾಮಾನ್ಯ ಕೈದಿಯ ಹಕ್ಕುಗಳನ್ನು ಕೊಡುವಂತೆ ಕೋರಿ ಜೈಲು ಆಡಳಿತದ ಜೊತೆ ಮಾತನಾಡಿದೆ...’ ‘ನಂತರ, ಪೊಲೀಸ್ ಭದ್ರತೆಯೊಂದಿಗೆ ಓಡಾಡಲು ಅವಕಾಶ ನೀಡಿದರು. ಊಟದ ಸಮಸ್ಯೆ ಪರಿಹರಿಸಿದರು’ ಎಂದು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿ ಆರು ತಿಂಗಳು ತಿಹಾರ್‌ ಜೈಲಿನಲ್ಲಿದ್ದ ಎಎಪಿಯ ಸಂಸದ ಸಂಜಯ್‌ ಸಿಂಗ್‌ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ, ಸುದ್ದಿಸಂಸ್ಥೆಗೆ ಶನಿವಾರ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ಹೆಚ್ಚು ಪುಸ್ತಕಗಳನ್ನು ಓದಿದ್ದರಿಂದ ನೈತಿಕವಾಗಿ ಸದೃಢಗೊಂಡೆ’ ಎಂದಿದ್ದಾರೆ. ‘ಕುಟುಂಬದವರೊಟ್ಟಿಗೆ ತಮಾಷೆ ಮಾತುಗಳನ್ನಾಡುವ ಮೂಲಕ ಅವರನ್ನು ನಗಿಸುತ್ತಿದ್ದೆ. ಅಳಲು ಅವಕಾಶ ಮಾಡಿಕೊಡಲಿಲ್ಲ’ ಎಂದು ತಾವು ಜೈಲಿನಲ್ಲಿದ್ದಾಗ ಕುಟುಂಬಕ್ಕೆ ಕಾಡಿದ ತಮ್ಮ ಅನುಪಸ್ಥಿತಿಯನ್ನು ನಿಭಾಯಿಸಿದ ಬಗ್ಗೆಯೂ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.