| ಸಿಂಘು, ಟಿಕ್ರಿ ಗಡಿ: ನಡಿಗೆಗಷ್ಟೇ ಅವಕಾಶ ಮುಕ್ತ ನವದೆಹಲಿ/ಚಂಡೀಗಢ: ರೈತರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಕಾರಣ, ದೆಹಲಿ ಪೊಲೀಸರು ಭಾನುವಾರ ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿನ ಕೆಲ ಸಿಮೆಂಟ್‌ ಬ್ಲಾಕ್‌ಗಳನ್ನು ತೆಗೆಯುವ ಮೂಲಕ ಜನರಿಗೆ ನಡಿಗೆ ಮೂಲಕ ಸಾಗುವಷ್ಟು ಮಾರ್ಗವನ್ನು ಮುಕ್ತಗೊಳಿಸಿದರು. ಆದರೆ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ. 'ಪಾಯಿಂಟ್‌– ಎ ಕಡೆಯಿಂದ ಪಾಯಿಂಟ್‌– ಬಿ ವರೆಗಿನ ತಡೆಗೋಡೆಯ ಒಂದು ಭಾಗವನ್ನು ಇಲ್ಲಿ ಸಂಚರಿಸುವವರಿಗಾಗಿ ನಾವು ತೆಗೆದಿದ್ದೇವೆ. ಇಲ್ಲಿ 24 ಗಂಟೆಯೂ ಪೊಲೀಸ್‌ ಮತ್ತು ಅರೆಸೇನಾ ಪಡೆ ನಿಗಾ ವಹಿಸಲಿದೆ. ಆದರೆ, ಸದ್ಯಕ್ಕೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ' ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ’ದೆಹಲಿಗೆ ಆಗಮಿಸುವವರಿಗೆ ಮತ್ತು ದೆಹಲಿಯಿಂದ ಹೊರ ಹೋಗುವವರಿಗೆ ಇದರಿಂದ ಅನುಕೂಲವಾಗಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗವನ್ನು ಮಾಡಲಾಗಿದೆ. ಆದರೂ, ಸಿಂಘು ಮತ್ತು ಟಿಕ್ರಿ ಮಾರ್ಗ ಬಳಸುವವರಿಗೆ ಹೆಚ್ಚಿನ ಅನುಕೂಲವಾಗಲಿ ಎಂಬ ಕಾರಣಕ್ಕೆ ಇಲ್ಲಿ ನಡಿಗೆ ಮೂಲಕ ಗಡಿ ದಾಟಲು ಅವಕಾಶ ಕಲ್ಪಿಸಲಾಗಿದೆ‘ ಎಂದು ಅವರು ಹೇಳಿದರು. ಈ ಕ್ರಮದಿಂದ ನಿತ್ಯ ಕೆಲಸಕ್ಕೆ ದೆಹಲಿಗೆ ಹೋಗಿ ಬರುವವರಿಗೆ ಸ್ವಲ್ಪವಾದರೂ ಅನುಕೂಲವಾಗುತ್ತದೆ ಎಂದು ಮನೋಜ್‌ ಕುಮಾರ್‌ ಎಂಬುವರು ಟಿಕ್ರಿ ಗಡಿ ಬಳಿ ಪ್ರತಿಕ್ರಿಯಿಸಿದ್ದಾರೆ. ಕ್ರಮಕ್ಕೆ ಬಿಜೆಪಿ ನಾಯಕ ಆಗ್ರಹ ಖನೌರಿ ಗಡಿಯಲ್ಲಿ ರೈತರ ಮೇಲೆ ಹರಿಯಾಣ ಪೊಲೀಸರು ನಡೆಸಿದ ದಾಳಿಯನ್ನು ‘ಅನಾಗರಿಕ ಹಿಂಸಾಚಾರ’ ಎಂದು ಖಂಡಿಸಿರುವ ಬಿಜೆಪಿಯ ಹಿರಿಯ ನಾಯಕ ಅಮರಿಂದರ್‌ ಸಿಂಗ್‌, ‘ತಪ್ಪಿತಸ್ಥ ಪೊಲೀಸರ ವಿರುದ್ಧ ಹರಿಯಾಣ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ನಿರಾಯುಧ ರೈತ ಯುವಕ ಪ್ರೀತ್ಪಾಲ್‌ ಸಿಂಗ್‌ ಅವರನ್ನು ಥಳಿಸಿ, ಗಾಯಗೊಳಿಸಿರುವುದು ಸರಿಯಲ್ಲ. ಈ ಕೃತ್ಯ ಎಸಗಿದ ಪೊಲೀಸರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಅವರನ್ನು ಒತ್ತಾಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.