370ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಲು ಅಮಿತ್ ಶಾ ಕರೆ ಗ್ವಾಲಿಯರ್‌: ಪ್ರತಿ ಬೂತ್‌ನಲ್ಲಿ 370 ಹೆಚ್ಚುವರಿ ಮತಗಳನ್ನು ಗಳಿಸುವ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಸಾಧಿಸಲು ಶ್ರಮಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮೊರೆನಾ, ಭಿಂಡ್, ಗುಣಾ ಮತ್ತು ಗ್ವಾಲಿಯರ್ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಕ್ಲಸ್ಟರ್‌ನ ಬೂತ್ ನಿರ್ವಹಣಾ ಸಮಿತಿಯ ಸುಮಾರು 400 ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಮತಗಳಿಕೆ ಪ್ರಮಾಣವನ್ನು ಶೇ 10ರಷ್ಟು ಹೆಚ್ಚಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಶಾ ಅವರು, ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ, ಚುನಾವಣೆಯ ಗೆಲುವಿಗೆ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಚರ್ಚಿಸಿದರು. ಇದಕ್ಕೂ ಮುನ್ನ, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮಾ ಅವರು ಅಮಿತ್‌ ಶಾ ಅವರನ್ನು ಸ್ವಾಗತಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.