ಮನೆ ವೆಚ್ಚ ಸಮೀಕ್ಷೆ ವರದಿ ಬೋಗಸ್‌: ಕಾಂಗ್ರೆಸ್‌ ನವದೆಹಲಿ (ಪಿಟಿಐ): ಇತ್ತೀಚೆಗೆ ಬಿಡುಗಡೆಯಾದ ಮನೆ ವೆಚ್ಚ ಸಮೀಕ್ಷೆಯ ವರದಿಯನ್ನು ಕಾಂಗ್ರೆಸ್ ಮಂಗಳವಾರ ಟೀಕಿಸಿದ್ದು, ‌‘ಇದೊಂದು ‘ಚುನಾವಣಾ ಪ್ರೇರಿತ’ವಾಗಿ ಅಭಿಪ್ರಾಯ ರೂಪಿಸಲು ಮಾಡಿರುವ ಬೋಗಸ್‌ ವರದಿಯಾಗಿದೆ. ದೇಶದ ಆರ್ಥಿಕತೆಯ ಅಂಕಿಅಂಶಗಳ ವಿಶ್ವಾಸಾರ್ಹತೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಾಶಪಡಿಸುತ್ತಿದೆ’ ಎಂದು ಆರೋಪಿಸಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್‌ಎಸ್‌ಎಸ್‌ಒ) ಶನಿವಾರ 2022-23ರ ಮನೆ ಬಳಕೆಯ ವೆಚ್ಚದ ಅಂಕಿಅಂಶ ಬಿಡುಗಡೆ ಮಾಡಿದ ನಂತರ ವಿರೋಧ ಪಕ್ಷ ಕಾಂಗ್ರೆಸ್‌ ತನ್ನ ಪ್ರತಿಕ್ರಿಯೆ ನೀಡಿದೆ. ಇತ್ತೀಚಿನ ಗ್ರಾಹಕ ವೆಚ್ಚ ಸಮೀಕ್ಷೆಯು ದೇಶದಲ್ಲಿ ಬಡತನವು ಶೇಕಡ 5ಕ್ಕೆ ಇಳಿದಿದೆ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರು ಸಮೃದ್ಧಿಯಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್‌. ಸುಬ್ರಹ್ಮಣಿಯಂ ಭಾನುವಾರ ಹೇಳಿದ್ದರು. ಕೇಂದ್ರ ಸರ್ಕಾರ ‘10 ವರ್ಷಗಳ ಗಾಢ ನಿದ್ದೆ’ಯ ಬಳಿಕ ‘ಚುನಾವಣಾ ಪ್ರೇರಿತ’ವಾಗಿ ಗೃಹ ಬಳಕೆ ವೆಚ್ಚ ಸಮೀಕ್ಷೆ ವರದಿ ಬಿಡುಗಡೆ ಮಾಡಿರುವಂತೆ, ಜಾತಿ ಸಮೀಕ್ಷೆಯ ನಿಖರ ಫಲಿತಾಂಶಕ್ಕಾಗಿ ಶೀಘ್ರವೇ ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಈ ವರದಿ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಗೃಹ ಬಳಕೆಯ ವೆಚ್ಚ ಸಮೀಕ್ಷೆ ವರದಿಯಲ್ಲಿ ತೋರಿಸಿರುವಂತೆ ದೇಶದಲ್ಲಿ ಎಲ್ಲವೂ ಹೊಳೆಯುತ್ತಿದ್ದರೆ, ಗ್ರಾಮೀಣ ಭಾರತದ ಶೇ 5ರಷ್ಟು ಬಡವರು ನಿತ್ಯ ಕೇವಲ ₹46 ಖರ್ಚಿನಲ್ಲಿ ಬದುಕಬೇಕಾಗಿದೆ? ಮೋದಿ ಸರ್ಕಾರ ಇಂತಹ ಸಮೀಕ್ಷೆಯಲ್ಲಿ ಬೆನ್ನು ತಟ್ಟಿಕೊಳ್ಳುವ ವಿಫಲ ಯತ್ನ ನಡೆಸಿದೆ’ ಎಂದು ಟೀಕಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.