ನಾಗರಿಕ ಸ್ವಾತಂತ್ರ್ಯಅತ್ಯಂತ ಮಹತ್ವದ್ದು: ಸುಪ್ರೀಂ ಕೋರ್ಟ್‌ ನವದೆಹಲಿ (ಪಿಟಿಐ): ‘ನಾಗರಿಕ ಸ್ವಾತಂತ್ರ್ಯ ಅತ್ಯಂತ ಮಹತ್ವದ್ದಾಗಿದ್ದು, ಅದಕ್ಕೆ ಸಂಬಂಧಿಸಿದ ವಿಷಯವನ್ನು ತ್ವರಿತವಾಗಿ ನಿರ್ಧರಿಸಬೇಕು. ಈ ನಿಟ್ಟಿನಲ್ಲಿ ವಿಳಂಬವಾದರೆ, ಅದು ಸಂವಿಧಾನದ 21ನೇ ವಿಧಿಯಡಿ ಖಾತರಿ ಪಡಿಸಿರುವ ಅಮೂಲ್ಯವಾದ ಹಕ್ಕನ್ನು ವ್ಯಕ್ತಿಯಿಂದ ಕಸಿದುಕೊಂಡಂತೆ ಆಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಜೀವದ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಇರುವ 21ನೇ ವಿಧಿಯು ಸಂವಿಧಾನದ ‘ಆತ್ಮ’ ಇದ್ದಂತೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಇತ್ತೀಚೆಗೆ ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ತ್ವರಿತವಾಗಿ ತೀರ್ಮಾನಿಸದಿರುವುದನ್ನು ಗಮನಿಸಿರುವುದಾಗಿ ತಿಳಿಸಿದೆ. ‘ನ್ಯಾಯಮೂರ್ತಿಗಳು ಅರ್ಹತೆಯ ಆಧಾರದ ಮೇಲೆ ವಿಷಯಗಳನ್ನು ನಿರ್ಧರಿಸದಿರುವುದನ್ನು ನಾವು ಗಮನಿಸಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರ ಪೀಠವು ಫೆಬ್ರುವರಿ 16ರ ಆದೇಶದಲ್ಲಿ ಉಲ್ಲೇಖಿಸಿದೆ. ಜಾಮೀನು ಅಥವಾ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದ ವಿಷಯವನ್ನು ಸಾಧ್ಯವಾದಷ್ಟು ತ್ವರಿತವಾಗಿ ನಿರ್ಧರಿಸಲು ನ್ಯಾಯಮೂರ್ತಿಗಳಿಗೆ ತಿಳಿಸುವಂತೆ ಪೀಠವು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಕೋರಿದೆ. ಆರೋಪಿಯೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್‌ 2023ರ ಮಾರ್ಚ್‌ 30ರಂದು ವಿಲೇವಾರಿ ಮಾಡಿ, ಅರ್ಜಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಯು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತು. ಹೈಕೋರ್ಟ್‌ನ ಆದೇಶವನ್ನು ಈ ವರ್ಷದ ಜನವರಿ 29ರಂದು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್‌, ಎರಡು ವಾರಗಳಲ್ಲಿ ಈ ಅರ್ಜಿಯ ಅರ್ಹತೆಯ ಬಗ್ಗೆ ನಿರ್ಧರಿಸುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್‌ ಫೆಬ್ರುವರಿ 12ರಂದು ಆರೋಪಿಗೆ ಜಾಮೀನು ನೀಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.