ಉ.ಪ್ರ | ಹೃದಯಾಘಾತದಿಂದ ಪತಿ ಸಾವು; ಮಹಡಿಯಿಂದ ಹಾರಿ ನೊಂದ ಪತ್ನಿ ಆತ್ಮಹತ್ಯೆ ಗಾಜಿಯಾಬಾದ್‌(ಉತ್ತರ ಪ್ರದೇಶ): ಹೃದಯಾಘಾತದಿಂದ ಪತಿ ಮೃತಪಟ್ಟಿರುವ ದುಃಖ ತಾಳಲಾರದೆ 23 ವರ್ಷದ ಪತ್ನಿ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಇಲ್ಲಿನ ಕೌಶಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ವೈಶಾಲಿ ಸೆಕ್ಟರ್-3ರಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಿಷೇಕ್ ಮತ್ತು ಅಂಜಲಿ ಇತ್ತೀಚೆಗೆ ವಿವಾಹವಾಗಿದ್ದರು. ಸೋಮವಾರ ದೆಹಲಿಯ ಪ್ರಾಣಿ ಸಂಗ್ರಹಾಲಯಕ್ಕೆ ನವ ಜೋಡಿ ಭೇಟಿ ನೀಡಿದ್ದು, ಈ ವೇಳೆ ಅಭಿಷೇಕ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಸಂಜೆ ಅಭಿಷೇಕ್ ಅವರ ಮೃತದೇಹವನ್ನು ಮನೆಗೆ ತರಲಾಗಿತ್ತು. ಮೃತದೇಹದ ಬಳಿ ಅಳುತ್ತಿದ್ದ ಅಂಜಲಿ ಇದ್ದಕ್ಕಿದ್ದಂತೆ ಎದ್ದು ಬಾಲ್ಕನಿಗೆ ಹೋಗಿ ಅಲ್ಲಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.