ತಡೆಯಾಜ್ಞೆಯ ತೆರವು: 2018ರ ತೀರ್ಪು ಅನೂರ್ಜಿತ: ಸುಪ್ರೀಂ ಕೋರ್ಟ್‌ ನವದೆಹಲಿ: ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಳಹಂತದ ನ್ಯಾಯಾಲಯಗಳು ಅಥವಾ ಹೈಕೋರ್ಟ್‌ ನೀಡುವ ತಡೆಯಾಜ್ಞೆಯು ಆರು ತಿಂಗಳ ನಂತರದಲ್ಲಿ ತಾನಾಗಿಯೇ ತೆರವಾಗುತ್ತದೆ ಎಂದು ಭಾವಿಸಬಾರದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ನೀಡಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್. ಓಕ, ಜೆ.ಬಿ. ಪಾರ್ದೀವಾಲಾ, ಪಂಕಜ್ ಮಿತ್ತಲ್ ಮತ್ತು ಮನೋಜ್ ಮಿಶ್ರಾ ಅವರು ಇದ್ದ ಸಂವಿಧಾನ ಪೀಠವು, ‘ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳು ಪ್ರಕರಣಗಳ ಇತ್ಯರ್ಥಕ್ಕೆ ಕೆಳಹಂತದ ನ್ಯಾಯಾಲಯಗಳಿಗೆ ಸಾಮಾನ್ಯ ಸಂದರ್ಭಗಳಲ್ಲಿ ಕಾಲಮಿತಿ ನಿಗದಿ ಮಾಡಬಾರದು’ ಎಂದು ಹೇಳಿದೆ. ‘ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರವೇ ಪ್ರಕರಣಗಳ ಇತ್ಯರ್ಥಕ್ಕೆ ಕಾಲಮಿತಿ ನಿಗದಿ ಮಾಡಬಹುದು. ಪ್ರಕರಣಗಳನ್ನು ಇತ್ಯರ್ಥಪಡಿಸುವಾಗ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಸಂಬಂಧಪಟ್ಟ ನ್ಯಾಯಾಲಯಗಳ ವಿವೇಚನೆಗೆ ಬಿಡುವುದು ಒಳ್ಳೆಯದು’ ಎಂದು ಸಂವಿಧಾನ ಪೀಠವು ಹೇಳಿದೆ. ನ್ಯಾಯಪೀಠದಲ್ಲಿ ಇದ್ದ ಓಕ ಮತ್ತು ಮಿಶ್ರಾ ಅವರು ಸಹಮತದ ಎರಡು ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದಾರೆ. 2018ರ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠವು, ಹೈಕೋರ್ಟ್‌ಗಳು ಸೇರಿದಂತೆ ನ್ಯಾಯಾಲಯಗಳು ನೀಡುವ ಮಧ್ಯಂತರ ತಡೆಯಾಜ್ಞೆಗಳನ್ನು ನಿರ್ದಿಷ್ಟವಾಗಿ ವಿಸ್ತರಿಸುವ ಆದೇಶ ಇಲ್ಲದೆ ಇದ್ದ ಸಂದರ್ಭಗಳಲ್ಲಿ ಅವು ತಾವಾಗಿಯೇ ತೆರವಾಗುತ್ತವೆ ಎಂದು ಹೇಳಿತ್ತು. ಅಂದರೆ, ಆರು ತಿಂಗಳ ನಂತರದಲ್ಲಿ ಯಾವುದೇ ವಿಚಾರಣೆ ಅಥವಾ ಕಾನೂನು ಪ್ರಕ್ರಿಯೆಗೆ ತಡೆ ಇರುವುದಿಲ್ಲ ಎಂದು ಹೇಳಿತ್ತು. ಆದರೆ, ಸುಪ್ರೀಂ ಕೋರ್ಟ್‌ ನೀಡಿದ್ದ ತಡೆಯಾಜ್ಞೆಗಳಿಗೆ ಈ ಮಾತು ಅನ್ವಯ ಆಗುವುದಿಲ್ಲ ಎಂದು ಪೀಠವು ಸ್ಪಷ್ಟನೆ ನೀಡಿತ್ತು. 2018ರ ಪ್ರಕರಣದಲ್ಲಿನ ತೀರ್ಪನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಓಕ ಅವರು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.