ಪಿಎಂಶ್ರೀ ಯೋಜನೆ ಶಾಲೆ: ಸಹಿ ಹಾಕದ ಐದು ರಾಜ್ಯಗಳು ನವದೆಹಲಿ: ಶಾಲೆಗಳನ್ನು ಮಾದರಿ ಸಂಸ್ಥೆಗಳಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಪಿಎಂಶ್ರೀ’ ಶಾಲಾ ಯೋಜನೆಗೆ ಐದು ರಾಜ್ಯಗಳು ಶಿಕ್ಷಣ ಸಚಿವಾಲಯದ ಜತೆ ಒಡಂಬಡಿಕೆಗೆ ಸಹಿ ಮಾಡಿಲ್ಲ. ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ದೆಹಲಿ ಒಪ್ಪಂದ ಮಾಡಿಕೊಳ್ಳದ ರಾಜ್ಯಗಳಾಗಿವೆ ಎಂದು ಮೂಲಗಳು ಹೇಳಿವೆ. ಈ ಯೋಜನೆಯು ದೇಶದ 14,500 ಶಾಲೆಗಳನ್ನು ಉನ್ನತೀಕರಿಸುವ ಗುರಿ ಹೊಂದಿದ್ದು, 18 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯ ಮೊದಲ ಸುತ್ತಿನಲ್ಲಿ ಉನ್ನತೀಕರಣಕ್ಕಾಗಿ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 6,448 ಶಾಲೆಗಳನ್ನು ಸರ್ಕಾರ ಈಗಾಗಲೇ ಆಯ್ಕೆ ಮಾಡಿದೆ. ‘ಸಮಗ್ರ ಶಿಕ್ಷಾ ಯೋಜನೆಯಡಿ ಕೇಂದ್ರದಿಂದ ಅನುದಾನ ಪಡೆಯುತ್ತಿದ್ದರೂ ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ದೆಹಲಿ ರಾಜ್ಯಗಳು ಪಿಎಂಶ್ರಿ ಶಾಲಾ ಯೋಜನೆಗೆ ಸಂಬಂಧಿಸಿದಂತೆ ಒಡಂಬಡಿಕೆಗೆ ಸಹಿ ಹಾಕಲು ನಿರಾಕರಿಸಿವೆ. ಒಪ್ಪಂದಕ್ಕೆ ಸಹಿ ಹಾಕಿರುವ ಪಂಜಾಬ್‌ ಅನುಷ್ಠಾನವನ್ನು ನಿಲ್ಲಿಸಿದೆ’ ಎಂದು ಮೂಲಗಳು ತಿಳಿಸಿವೆ. ಈ ರಾಜ್ಯಗಳಿಗೆ ಸಮಗ್ರ ಶಿಕ್ಷಾ ಯೋಜನೆಯಡಿ ಬರುತ್ತಿರುವ ಅನುದಾನವನ್ನು ಕೇಂದ್ರ ನಿಲ್ಲಿಸಬಹುದೇ ಎಂಬ ಪ್ರಶ್ನೆಗೆ, ‘ಅದನ್ನು ತಳ್ಳಿಹಾಕಲು ಸಾಧ್ಯವಿಲ್ಲ’ ಎಂದು ಮೂಲಗಳು ಹೇಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.