ಬಿಜೆಪಿಯ ಡಬಲ್‌ ಎಂಜಿನ್‌ ದುರಾಡಳಿತಕ್ಕೆ ಗುಜರಾತ್‌ ಉದಾಹರಣೆ: ಖರ್ಗೆ ವಾಗ್ದಾಳಿ ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಗುಜರಾತ್‌ನಲ್ಲಿ 25 ಸಾವಿರ ಜನ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಗುಜರಾತ್‌ ಸರ್ಕಾರದ ವಿರುದ್ಧ ಕಿಡಿಕಾರಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಇದು ‌‌ಬಿಜೆಪಿಯ ಡಬಲ್‌ ಎಂಜಿನ್‌ ದುರಾಡಳಿತಕ್ಕೆ ಮತ್ತೊಂದು ಉದಾಹರಣೆ’ ಎಂದರು. ಗುಜರಾತ್‌ನಲ್ಲಿ 2020ರಿಂದ 2023ರವರೆಗೆ 495 ವಿದ್ಯಾರ್ಥಿಗಳು ಸೇರಿದಂತೆ 25,578 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗುಜರಾತ್‌ ಸರ್ಕಾರ ಸೋಮವಾರ ವಿಧಾನಸಭೆಗೆ ನೀಡಿದ ಮಾಹಿತಿ ಕುರಿತು ಪ್ರತಿಕ್ರಿಯಿಸಿದ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ತವರು ರಾಜ್ಯದಲ್ಲಿ ನಡೆಯುತ್ತಿರುವ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ನಾಗರಿಕರ ರಕ್ಷಣೆ ಮತ್ತು ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಸಮಸ್ಯೆಗಳ ನಿವಾರಣೆ ಮಾಡುವಲ್ಲಿ ಭೂಪೇಂದ್ರ ಪಟೇಲ್‌ ಸರ್ಕಾರ ವಿಫಲವಾಗಿರುವುದು ಸ್ಪಷ್ಟವಾಗಿದೆ’ ಎಂದರು. ‘ದುರ್ಬಲರಿಗೆ ನೆರವು ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿರುವುದನ್ನು ಈ ದತ್ತಾಂಶಗಳಿಂದ ಗೊತ್ತಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದ್ದ ಭರವಸೆಗಳು ಹುಸಿಯಾಗಿವೆ’ ಎಂದು ಟೀಕಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.