ಕೇರಳ: ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಅಮಾನತು ತಿರುವನಂತಪುರ: ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣ ಸಂಬಂಧ ವಯನಾಡಿನ ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್‌. ಶಶೀಂದ್ರನಾಥ್ ಅವರನ್ನು ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್ ಶನಿವಾರ ಅಮಾನತು ಮಾಡಿದ್ದಾರೆ. ವಿದ್ಯಾರ್ಥಿ ಸಿದ್ಧಾರ್ಥನ್‌ ಸಾವಿಗೆ ಸಂಬಂಧಿಸಿದಂತೆ ಕುಲಪತಿ ನೀಡಿರುವ ವರದಿಯು, ‘ಕುಲಪತಿ ಅವರ ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿದೆ’ ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ‘ಕುಲಪತಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಅಸಡ್ಡೆ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ’ ಎಂದಿದ್ದಾರೆ. ವಿದ್ಯಾರ್ಥಿ ಸಾವು ಪ್ರಕರಣದ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ವಿ.ವಿಯ ಎರಡನೇ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ ಸಿದ್ಧಾರ್ಥನ್‌ ಅವರು ಮೃತದೇಹವು ಹಾಸ್ಟೆಲ್‌ನ ಸ್ನಾನಗೃಹದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಫೆ.18 ರಂದು ಪತ್ತೆಯಾಗಿತ್ತು. ಎಸ್‌ಎಫ್‌ಐ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಸಿದ್ಧಾರ್ಥನ್‌ ಸ್ನೇಹಿತರು ತಿಳಿಸಿರುವುದಾಗಿ, ಆತನ ಪೋಷಕರು ಆರೋಪಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.