ಭ್ರಷ್ಟಾಚಾರ ಟೀಕಿಸುವ ಮೋದಿ ಭ್ರಷ್ಟಾಚಾರಿ ಜತೆ ವೇದಿಕೆ ಹಂಚಿಕೊಂಡಿದ್ಯಾಕೆ?: ಕೋಲ್ಕತ್ತ : ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರು ನಾರದ ಪ್ರಕರಣದ ಆರೋಪಿಯಾಗಿರುವ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಏಕೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವ ಶಶಿ ಪಂಜ ಪ್ರಶ್ನಿಸಿದರು. ‘ಚುನಾವಣೆ ಸಮೀಪಿಸುವಾಗ ಮಾತ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ ಟಿಎಂಸಿಯಂತಹ ವಿರೋಧ ಪಕ್ಷಗಳನ್ನು ಹೊರತುಪಡಿಸಿ ದೇಶದಲ್ಲಿ ಎಲ್ಲಿಯೂ ಅವರಿಗೆ ಭ್ರಷ್ಟಾಚಾರ ಕಾಣುವುದೇ ಇಲ್ಲ’ ಎಂದು ಅವರು ವ್ಯಂಗ್ಯವಾಡಿದ್ದಾರೆ. ‘ಪ್ರಧಾನಿ ಮೋದಿ ಅವರು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಸಿಬಿಐ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಸುವೆಂದು ಅಧಿಕಾರಿಯನ್ನು ಅವರು ಏಕೆ ಇನ್ನೂ ತಮ್ಮ ಪಕ್ಷದಲ್ಲಿಯೇ ಇರಿಸಿಕೊಂಡಿದ್ದಾರೆ’ ಎಂದು ಟಿಎಂಸಿ ನಾಯಕ ಸಂತಾನು ಸೇನ್‌ ಕೇಳಿದರು.‌ ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸರ್ಕಾರವು ದಬ್ಬಾಳಿಕೆ, ಕುಟುಂಬ ರಾಜಕಾರಣ ಮತ್ತು ದ್ರೋಹಕ್ಕೆ ಮತ್ತೊಂದು ಹೆಸರಾಗಿದೆ. ಅಲ್ಲದೆ ಯೋಜನೆಗಳನ್ನು ಹಗರಣಗಳನ್ನಾಗಿ ಪರಿವರ್ತಿಸುವಲ್ಲಿ ಟಿಎಂಸಿ ನೈಪುಣ್ಯತೆ ಸಾಧಿಸಿದೆ’ ಎಂದು ಹೇಳಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.