‘ಅಶ್ಲೀಲ ವಿಡಿಯೊ’: ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿ ನಕಾರ ಲಖನೌ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದ ಉಪೇಂದ್ರ ಸಿಂಗ್ ರಾವತ್, ಸ್ಪರ್ಧಿಸಲು ನಿರಾಕರಿಸಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಸ್ಪರ್ಧಿಸಲು ನಿರಾಕರಿಸುತ್ತಿರುವ ಎರಡನೇ ಅಭ್ಯರ್ಥಿ ಇವರು. ಈಗಾಗಲೇ ಭೋಜಪುರಿ ಗಾಯಕ ಪವನ್‌ ಸಿಂಗ್ ಅವರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ಉಪೇಂದ್ರ ಅವರದ್ದು ಎನ್ನಲಾದ ‘ಅಶ್ಲೀಲ ವಿಡಿಯೊ’ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿತ್ತು. ಅದರ ಹಿಂದೆಯೇ ಈ ನಿರ್ಧಾರ ತಳೆದಿದ್ದಾರೆ. ‘ವಿಡಿಯೊ ನಕಲಿಯಾಗಿದ್ದು, ಎ.ಐ ತಂತ್ರಜ್ಞಾನ ಬಳಸಿ ತಿರುಚಲಾಗಿದೆ’ ಎಂದು ಆರೋಪಿಸಿರುವ ಅವರು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ಸಂಬಂಧ ರಾವತ್‌ ಅವರ ಕಡೆಯವರು ಪೊಲೀಸರಿಗೂ ದೂರು ನೀಡಿದ್ದಾರೆ. ‘ನನ್ನದು ಎನ್ನಲಾದ ತಿರುಚಿದ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ. ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಇದನ್ನು ಸೃಷ್ಟಿಸಲಾಗಿದೆ. ಈ ಬಗ್ಗೆ ದೂರು ನೀಡಿದ್ದೇನೆ. ತನಿಖೆಯಾಗಬೇಕು ಎಂದು ಪಕ್ಷದ ಅಧ್ಯಕ್ಷರಿಗೂ ಕೋರಿದ್ದೇನೆ. ನನ್ನದು ತಪ್ಪಿಲ್ಲ ಎಂದು ದೃಢಪಡುವವರೆಗೂ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ’ ಎಂದು ರಾವತ್ ಅವರು ಎಕ್ಸ್‌ ಜಾಲತಾಣದಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ರಾವತ್‌ ಅವರದ್ದು ಎನ್ನಲಾದ ಎರಡು ವಿಡಿಯೊಗಳು ಭಾನುವಾರ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದ್ದವು. ಎರಡೂ ವಿಡಿಯೊಗಳು ಎರಡು ವರ್ಷ ಹಳೆಯದ್ದು ಎನ್ನಲಾಗಿದೆ. ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.