ಜೆಎಂಎಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಶುದ್ಧ ರಾಜಕಾರಣಕ್ಕೆ ದಾರಿ: ಮೋದಿ ನವದೆಹಲಿ: ಜೆಎಂಎಂ ಲಂಚ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅದ್ಬುತವಾದುದ್ದಾಗಿದೆ. ಇದು ಶುದ್ಧ ರಾಜಕಾರಣವನ್ನು ಖಚಿತಪಡಿಸುತ್ತದೆ ಮತ್ತು ವ್ಯವಸ್ಥೆ ಮೇಲೆ ಜನರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶಾಸನ ಸಭೆಯಲ್ಲಿ ಮತ ಹಾಕಲು ಅಥವಾ ಪ್ರಶ್ನೆ ಕೇಳಲು ಲಂಚ ಪಡೆಯುವ ಜನಪ್ರತಿನಿಧಿಗಳಿಗೆ ಕಾನೂನಿನ ವಿನಾಯಿತಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂಸತ್ತಿನಲ್ಲಿ ಮತ ಚಲಾಯಿಸಲು ಮತ್ತು ಮಾತನಾಡಲು ಲಂಚ ಪಡೆದುಕೊಂಡ ಸಂಸದರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇದೆ ಎಂದು 1998ರಲ್ಲಿ ಜೆಎಂಎಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐದು ಸದಸ್ಯರ ಪೀಠ ಹೇಳಿತ್ತು. ಆ ತೀರ್ಪನ್ನು ಇಂದು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಲಂಚ ಪಡೆದು ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮತ ಚಲಾಯಿಸುವುದು ಮತ್ತು ಭಾಷಣ ಮಾಡುವುದು ಅಪರಾಧ ಎಂದು ಏಳು ನ್ಯಾಯಮೂರ್ತಿಗಳ ಪೀಠವು ಈಗ ತೀರ್ಪು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, 'ಸ್ವಾಗತಂ.. ಸುಪ್ರೀಂ ಕೋರ್ಟ್‌ನಿಂದ ಒಂದು ಅದ್ಭುತ ತೀರ್ಪು.. ಇದು ಶುದ್ಧ ರಾಜಕಾರಣವನ್ನು ಖಚಿತಪಡಿಸುತ್ತದೆ ಮತ್ತು ವ್ಯವಸ್ಥೆ ಮೇಲೆ ಜನರಿಗೆ ನಂಬಿಕೆಯನ್ನು ಹೆಚ್ಚಿಸುತ್ತದೆ’ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಮೋದಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.