ಅಧಿಕಾರದ ದುರಾಸೆಯುಳ್ಳವರಷ್ಟೇ ಕಾಂಗ್ರೆಸ್ ತೊರೆಯುತ್ತಿದ್ದಾರೆ: ದಿಗ್ವಿಜಯ್ ಸಿಂಗ್ ಗ್ವಾಲಿಯರ್‌: ಅಧಿಕಾರ, ಸಂಪತ್ತು ಹಾಗೂ ಆಸ್ತಿ ಸಂಪಾದಿಸುವ ಅತಿಯಾಸೆ ಹೊಂದಿರುವವರು ಮಾತ್ರ ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಮತ್ತು ರಾಜ್ಯಸಭೆ ಸದಸ್ಯ ದಿಗ್ವಿಜಯ್‌ ಸಿಂಗ್‌ ಭಾನುವಾರ ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್‌ನ ಮಾಜಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸ್ಥಾನ ನೀಡಿರುವುದನ್ನು ಉಲ್ಲೇಖಿಸಿ ಸಿಂಗ್‌ ಈ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿರುವ ಸಿಂಗ್, 'ಅಧಿಕಾರ, ಸಂಪತ್ತು ಹಾಗೂ ಆಸ್ತಿ ಗಳಿಸುವ ದುರಾಸೆ ಹೊಂದಿರುವವರಷ್ಟೇ ಪಕ್ಷ ಬಿಡುತ್ತಿದ್ದಾರೆ. ಸೈಂದ್ಧಾತಿಕ ರಾಜಕೀಯದಲ್ಲಿ ನಂಬಿಕೆ ಹೊಂದಿಲ್ಲದವರು ಅಧಿಕಾರಕ್ಕಾಗಿ ಪಕ್ಷ ತೊರೆಯುತ್ತಾರೆ' ಎಂದು ಕುಟುಕಿದ್ದಾರೆ. 2020ರ ಮಾರ್ಚ್‌ನಲ್ಲಿ ಕಾಂಗ್ರೆಸ್‌ ಬಿಟ್ಟು ಕಮಲ ಪಾಳಯಕ್ಕೆ ಸೇರಿದ್ದ ಸಿಂಧಿಯಾ ಅವರ ಹೆಸರನ್ನು ಬಿಜೆಪಿ ಶನಿವಾರ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಿದೆ. ಅವರು ಮಧ್ಯಪ್ರದೇಶದ ಗುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ವಿಶೇಷವೆಂದರೆ, 2019ರಲ್ಲಿಯೂ ಇದೇ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿಂಧಿಯಾ, ಬಿಜೆಪಿಯ ಕೆ.ಪಿ. ಸಿಂಗ್‌ ಯಾದವ್‌ ಎದುರು ಸೋಲು ಕಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.