‍ಪಶ್ಚಿಮ ಬಂಗಾಳ ಅಧ್ಯಕ್ಷರ ಕಾರು ಅಪಘಾತ: ಟಿಎಂಸಿ ವಿರುದ್ಧ ಆರೋಪ ಕೋಲ್ಕತ್ತ: ನಾಡಿಯಾ ಜಿಲ್ಲೆಯ ಶಾಂತಿಪುರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ಭಾನುವಾರ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದರ್ ಅವರ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಠವಶಾತ್‌ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್‌ ಒಂದನ್ನು ಓವರ್‌ಟೇಕ್ ಮಾಡುವಾಗ, ಬೆಂಗಾವಲು ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಬೆಂಗಾವಲು ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ ಎಂದು ಮಜುಂದರ್ ತಿಳಿಸಿದ್ದಾರೆ. ಫುಟ್‌ಬಾಲ್ ಟೂರ್ನಮೆಂಟ್‌ ಒಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಲಾಗಿದೆಯೇ ಎಂದು ತಿಳಿದುಕೊಳ್ಳಲು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಸ್ತೆ ರಿಪೇರಿ ನಡೆಯುತ್ತಿರುವುದರಿಂದ ದಟ್ಟಣೆ ಉಂಟಾಗಿದ್ದು, ಹೀಗಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಸ್‌ನಿಂದಾಗಿ ರಸ್ತೆ ಒಂದು ಬದಿಯಲ್ಲಿ ಭಾಗಶಃ ಅಡಚಣೆ ಉಂಟಾಗಿತ್ತು ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ ರಾಜ್ಯ ಬಿಜೆಪಿ ಘಟಕವು ಎರಡು ಕಾರುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆಡಳಿತರೂಢ ಟಿಎಂಸಿ ಪಕ್ಷಕ್ಕೆ ಸೇರಿದ ಕಾರು ಅತಿ ವೇಗದಲ್ಲಿ ಮಜುಂದರ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಅವರು ಜೀವ ಬೆದರಿಕೆಯ ದಾಳಿಗೆ ಒಳಗಾಗಿದ್ದಾರೆ ಎಂದು ದೂರಿದೆ. ‘ಬಂಗಾಳದ ಜನತೆಯ ಬೆಂಬಲದಿಂದಾಗಿ ಮಜುಂದರ್‌ ಬದುಕುಳಿದಿದ್ದಾರೆ. ಗಾಯಗೊಂಡಿರುವ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ಬಿಜೆಪಿ ತನ್ನ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.