ದೆಹಲಿಯ ಪಕ್ಷದ ಕಚೇರಿ ತೆರವು ಮಾಡಲು ಎಎಪಿಗೆ ಜೂ.15ರವರೆಗೆ ಕಾಲಾವಕಾಶ ನವದೆಹಲಿ: ನ್ಯಾಯಾಂಗ ಸಂಕೀರ್ಣವನ್ನು ವಿಸ್ತರಿಸಲು ದೆಹಲಿ ಹೈಕೋರ್ಟ್‌ಗೆ ಮಂಜೂರು ಮಾಡಲಾಗಿದ್ದ ಭೂಮಿಯಲ್ಲಿ ಎಎಪಿ ಪಕ್ಷದ ಕಚೇರಿ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಮನಗಂಡಿರುವ ಸುಪ್ರೀಂ ಕೋರ್ಟ್, ಜಾಗದ ತೆರವಿಗೆ 2024ರ ಜೂನ್ 15ರ ವರೆಗೆ ಕಾಲಾವಕಾಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಪಕ್ಷದ ಕಚೇರಿಗಾಗಿ ಭೂಮಿ ಮಂಜೂರು ಮಾಡಲು ಭೂಮಿ ಮತ್ತು ಅಭಿವೃದ್ಧಿ ಕಚೇರಿಗೆ ಮನವಿ ಸಲ್ಲಿಸುವಂತೆ ಎಎಪಿಗೆ ಸೂಚಿಸಿದೆ. ‘4 ವಾರಗಳ ಒಳಗೆ ಎಎಪಿ ಅರ್ಜಿ ವಿಲೇವಾರಿ ಮಾಡಿ ಮಾಹಿತಿ ನೀಡುವಂತೆ ಭೂಮಿ ಮತ್ತು ಅಭಿವೃದ್ಧಿ ಕಚೇರಿಗೆ ನಾವು ಮನವಿ ಮಾಡುತ್ತೇವೆ’ ಎಂದು ಹೇಳಿರುವ ನ್ಯಾಯಾಲಯವು, ಆ ಜಾಗದಲ್ಲಿ ಮುಂದುವರಿಯಲು ಎಎಪಿಗೆ ಯಾವುದೇ ಕಾನೂನುಬದ್ಧ ಹಕ್ಕು ಇಲ್ಲ ಎಂದಿದೆ. ಎಎಪಿ ಪರ ಹಾಜರಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ, ಪಕ್ಷವು ದೇಶದ 6 ರಾಷ್ಟ್ರೀಯ ಪಕ್ಷಗಳ ಪೈಕಿ ಒಂದು ಎಂದು ಹೇಳಿದ್ದಾರೆ. ‘ರಾಷ್ಟ್ರೀಯ ಪಕ್ಷವಾಗಿ ತಾವು ಪಡೆದಿದ್ದು ಏನೂ ಇಲ್ಲ ಎಂದು ಪಕ್ಷ ಹೇಳುತ್ತಿದೆ. ಬದರ್‌ಪುರದಲ್ಲಿ ನಮಗೆ ಸ್ಥಳ ನೀಡಲಾಗಿದೆ. ಬೇರೆ ಪಕ್ಷಗಳಿಗೆ ಉತ್ತಮ ಜಾಗದಲ್ಲಿ ಸ್ಥಳ ನೀಡಲಾಗಿದೆ’ ಎಂದು ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದ ಗಮನಕ್ಕೆ ತಂದರು. ‘ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ 2024ರ ಜೂನ್ 15ರವರೆಗೆ ನಾವು ಕಾಲಾವಕಾಶ ನೀಡುತ್ತಿದ್ದೇವೆ. ಆ ಬಳಿಕ, ಜಿಲ್ಲಾ ನ್ಯಾಯಾಂಗ ಸಂಕೀರ್ಣ ವಿಸ್ತರಣೆಗೆ ಅವಕಾಶ ನೀಡಲಾಗುತ್ತದೆ’ ಎಂದು ಕೋರ್ಟ್ ಹೇಳಿದೆ. ರೋಸ್ ಅವೆನ್ಯೂ ಪ್ರದೇಶದಲ್ಲಿ ಎಎಪಿ ಒತ್ತುವರಿ ತೆರವು ಮಾಡಿಕೊಂಡಿರುವ ಸ್ಥಳವನ್ನು ತೆರವು ಮಾಡಲು ಮಾತುಕತೆ ನಡೆಸುವಂತೆ ದೆಹಲಿ ಸರ್ಕಾರ ಮತ್ತು ದೆಹಲಿ ಹೈಕೋರ್ಟ್‌ನ ರಿಜಿಸ್ರ್ಟಾರ್ ಜನರಲ್‌ಗೆ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.