ಕೇರಳ: ವಲಸೆ ಕಾರ್ಮಿಕನ ಹತ್ಯೆ; 10 ಮಂದಿ ಬಂಧನ ಕೊಚ್ಚಿ: ಕೇರಳದ ಮೂವಾಟ್ಟುಪುಳದಲ್ಲಿ ವಲಸೆ ಕಾರ್ಮಿಕರೊಬ್ಬರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಶಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಅರುಣಾಚಲ ಪ್ರದೇಶದ ಅಶೋಕ್‌ ದಾಸ್‌ (24) ಎಂದು ಗುರುತಿಸಲಾಗಿದೆ. ಉದ್ಯೋಗ ಅರಸಿ ಕೇರಳಕಕ್ಕೆ ಬಂದಿದ್ದ ಅಶೋಕ್‌, ಮೂವಾಟ್ಟುಪುಳ ಸಮೀಪದ ವಾಳಕಂ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಎಫ್‌ಐಆರ್‌ ಪ್ರಕಾರ ಗುರುವಾರ ರಾತ್ರಿ ಅಶೋಕ್‌ ಅವರು, ಅದೇ ಪ್ರದೇಶದಲ್ಲಿದ್ದ ತಮ್ಮ ಸ್ನೇಹಿತೆಯರನ್ನು ಭೇಟಿಯಾಗಲು ತೆರಳಿದ್ದರು. ಆಗ ಸ್ಥಳೀಯರ ಗುಂಪೊಂದು ಅವರನ್ನು ಕಂಬಕ್ಕೆ ಕಟ್ಟಿಹಾಕಿ, ವಿಚಾರಣೆ ನಡೆಸಿ, ಬಳಿಕ ತೀವ್ರವಾಗಿ ಹಲ್ಲೆ ಮಾಡಿದೆ ಎಂದು ಮೂಲಗಳು ಹೇಳಿವೆ. ಅಶೋಕ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಶುಕ್ರವಾರ ಮೃತಪಟ್ಟರು. ಅಶೋಕ್‌ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.