ನ್ಯಾಯ ಕೇಳಿದೆ, ಅವಮಾನ ಸಿಕ್ಕಿತು: ಅನರ್ಹ ಶಾಸಕ ರಾಣಾ ಶಿಮ್ಲಾ : ‘ನಾನು ನ್ಯಾಯಕ್ಕಾಗಿ ಆಶಿಸಿದೆ. ಆದರೆ, ಅವಮಾನ ಸಿಕ್ಕಿತು’ ಎಂದು ಹಿಮಾಚಲ ಪ್ರದೇಶದ ಅನರ್ಹ ಶಾಸಕ ರಾಜಿಂದರ್‌ ರಾಣಾ ಹೇಳಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಕಾರಣಕ್ಕೆ ಅನರ್ಹಗೊಂಡಿರುವ ಕಾಂಗ್ರೆಸ್‌ನ ಆರು ಶಾಸಕರು ತಮ್ಮನ್ನು ಅನರ್ಹಗೊಳಿಸಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಪ್ರಶ್ನಿಸಿದ್ದಾರೆ. ಈ ಬೆನ್ನಲ್ಲೇ ರಾಣಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ ಭರವಸೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಸುಜನಪುರದಿಂದ ಶಿಮ್ಲಾಕ್ಕೆ ಮತ್ತು ಶಿಮ್ಲಾದಿಂದ ದೆಹಲಿಗೆ ಅಲೆದಾಡಿದ್ದೇನೆ. ಕೈಕಟ್ಟಿ ನಿಂತಿದ್ದೇನೆ. ಇದಾವುದೂ ಫಲ ನೀಡಲಿಲ್ಲ’ ಎಂದಿದ್ದಾರೆ. ರಾಜ್ಯದ ಜನರನ್ನು ಉದ್ದೇಶಿಸಿ, ‘ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೀವು ಗಮನಿಸಿರುತ್ತೀರಿ. ಜನರ ವಿಚಾರದಲ್ಲಿ ನನಗಿರುವ ಬದ್ಧತೆ, ನಿಷ್ಠೆ, ಸಮರ್ಪಣಾ ಮನೋಭಾವದ ಕಾರಣಕ್ಕೆ ನನ್ನ ವಿರುದ್ಧ ಒಳಗೊಳಗೇ ಸಂಚು ರೂಪಿಸಿರುವ ಕುರಿತು ನಿಮಗೆ ತಿಳಿಸಲು ಈ ಪೋಸ್ಟ್‌ ಮಾಡುತ್ತಿದ್ದೇನೆ’ ಎಂದು ಬರೆದಿದ್ದಾರೆ. ಕಡೆಯಲ್ಲಿ, ‘ನನ್ನ ಮುಂದೆ ಇದ್ದಿದ್ದು ಎರಡೇ ಆಯ್ಕೆಗಳು, ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರ ಸಂಪುಟ ಸೇರುವುದು ಅಥವಾ ಅವರ ಆಡಳಿತದ ವಿರುದ್ಧ ಬಂಡಾಯ ಏಳುವುದು. ರಾಜ್ಯದ ಜನರ ಹಿತಾಸಕ್ತಿ ದೃಷ್ಟಿಯಿಂದ ನಾನು ಎರಡನೇ ಆಯ್ಕೆಯನ್ನು ಆರಿಸಿಕೊಂಡೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.