ಸಂದೇಶ್‌ಖಾಲಿ ಬಿರುಗಾಳಿ ಬಂಗಾಳ ವ್ಯಾಪಿಸಲಿದೆ: ಮೋದಿ ಬಾರಾಸತ್(ಪಶ್ಚಿಮ ಬಂಗಾಳ): ‘ಸಂದೇಶ್‌ಖಾಲಿ ಬಿರುಗಾಳಿ ಪಶ್ಚಿಮ ಬಂಗಾಳದ ಮೂಲೆ ಮೂಲೆಗೂ ವ್ಯಾಪಿಸಲಿದೆ. ಲೋಕಸಭಾ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಧೂಳೀಪಟ ಮಾಡುವಲ್ಲಿ ‘ನಾರಿ ಶಕ್ತಿ’ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು. ಉತ್ತರ 24 ಪರಗಣ ಜಿಲ್ಲೆಯ ಕೇಂದ್ರ ಸ್ಥಾನವಾದ ಬಾರಾಸತ್‌ನಲ್ಲಿ ನಡೆದ ‘ನಾರಿ ಶಕ್ತಿ ವಂದನ ಅಭಿನಂದನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂದೇಶ್‌ಖಾಲಿಯಲ್ಲಿ ಮಹಿಳೆಯರಿಗೆ ಆಗಿರುವ ಅನ್ಯಾಯ, ಅವರ ಮೇಲಿನ ದೌರ್ಜನ್ಯ ನಾಚಿಕೆಗೇಡಿನದು ಎಂದು ಹೇಳಿದರು. ‘ಆಡಳಿತಾರೂಢ ಟಿಎಂಸಿ ರಾಜ್ಯದ ಮಹಿಳೆಯರ ಸುರಕ್ಷತೆಯ ಬದಲಾಗಿ, ಓಲೈಕೆ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದೆ’ ಎಂದು ಆರೋಪಿಸಿದರು. ‘ರಾಜ್ಯ ಹಲವೆಡೆ, ಬಡವರು, ದಲಿತರು ಹಾಗೂ ಬುಡಕಟ್ಟು ಕುಟುಂಬಗಳ ಹೆಣ್ಣು ಮಕ್ಕಳ ಮೇಲೆ ಟಿಎಂಸಿ ನಾಯಕರು ದೌರ್ಜನ್ಯ ಎಸಗುತ್ತಿದ್ದಾರೆ. ಈ ವಿಚಾರವಾಗಿ ಪಶ್ಚಿಮ ಬಂಗಾಳವಲ್ಲದೇ ದೇಶದ ಇತರ ಭಾಗಗಳ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಮಹಿಳೆಯರ ಈ ಆಕ್ರೋಶದ ಬಿರುಗಾಳಿ ದೇಶದ ಎಲ್ಲೆಡೆ ವ್ಯಾಪಿಸಲಿದ್ದು, ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ನಾಶ ಮಾಡಲಿದೆ’ ಎಂದು ಮೋದಿ ಹೇಳಿದರು. ‘ಟಿಎಂಸಿ ಪಕ್ಷ ಕ್ರಿಮಿನಲ್‌ಗಳನ್ನು ರಕ್ಷಣೆ ಮಾಡುತ್ತಿದೆ. ನ್ಯಾಯಾಲಯ ಮಧ್ಯಪ್ರವೇಶ ಮಾಡಿದ್ದರೂ, ರಾಜ್ಯದ ಅಧಿಕಾರಿಗಳು ಸಂದೇಶ್‌ಖಾಲಿ ಘಟನೆಗಳಿಗೆ ಕಾರಣರಾದವರನ್ನು ಬಂಧಿಸಲಿಲ್ಲ. ಓಲೈಕೆ ರಾಜಕಾರಣದಲ್ಲಿ ತೊಡಗಿರುವ ಟಿಎಂಸಿ, ದಲ್ಲಾಳಿಗಳ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ, ಪುತ್ರಿಯರಿಗೆ, ಸಹೋದರಿಯರಿಗೆ ಎಂದಿಗೂ ಟಿಎಂಸಿ ಸರ್ಕಾರ ರಕ್ಷಣೆ ಕೊಡುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು. ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು, ಮಹಿಳಾ ಸಹಾಯವಾಣಿ ಸೇರಿದಂತೆ ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಸಂಕಷ್ಟದಲ್ಲಿರುವ ಮಹಿಳೆಯರು ಸುಲಭವಾಗಿ ತಮ್ಮ ದೂರುಗಳನ್ನು ದಾಖಲಿಸಬೇಕು ಎಂಬ ದೃಷ್ಟಿಯಿಂದ ಈ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಆದರೆ, ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಟಿಎಂಸಿ ಸರ್ಕಾರ ಅನುಮತಿ ನೀಡುತ್ತಿಲ್ಲ. ಇಂತಹ ಮಹಿಳಾ ವಿರೋಧಿ ಸರ್ಕಾರ ಮಹಿಳೆಯರಿಗೆ ಒಳ್ಳೆಯದನ್ನು ಮಾಡಲು ಸಾಧ್ಯ ಇಲ್ಲ’ ಎಂದು ಮೋದಿ ಟೀಕಿಸಿದರು. ‘ರಾಜ್ಯದ ಅಭಿವೃದ್ಧಿಗೆ ಟಿಎಂಸಿ ಅಡ್ಡಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ವನ್ನು ತಿರಸ್ಕರಿಸಿ, ಬಿಜೆಪಿಗೆ ಮತ ಹಾಕಿ’ ಎಂದು ಮನವಿ ಮಾಡಿದರು. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಾರಾಸತ್‌ನಲ್ಲಿ ಬುಧವಾರ ನಡೆದ ‘ನಾರಿ ಶಕ್ತಿ ವಂದನ ಅಭಿನಂದನ’ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಿದರು – ಪಿಟಿಐ ಚಿತ್ರ ಅಪರಾಧಿಗಳನ್ನು ರಕ್ಷಿಸಲು ಟಿಎಂಸಿ ತನ್ನೆಲ್ಲ ಅಧಿಕಾರ ಬಳಸಿಕೊಂಡಿದೆ. ಮೊದಲು ಹೈಕೋರ್ಟ್‌ ನಂತರ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ -ನರೇಂದ್ರ ಮೋದಿ ಪ್ರಧಾನಿ ನ್ಯಾಯ ದೊರಕಿಸುವಂತೆ ಮಹಿಳೆಯರ ಮೊರೆ ಟಿಎಂಸಿ ಮುಖಂಡರಿಂದ ಲೈಂಗಿಕ ದೌರ್ಜನ್ಯ ನಡೆದಿದ್ದ ಆರೋಪಗಳಿಂದಾಗಿ ಸುದ್ದಿಯಲ್ಲಿರುವ ಸಂದೇಶ್‌ಖಾಲಿಯ ಮಹಿಳೆಯರ ಗುಂಪನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ಮಾಡಿದರು. ‘24 ಉತ್ತರ ಪರಗಣ ಜಿಲ್ಲೆಯ ಬಾರಾಸತ್‌ನಲ್ಲಿ ನಡೆದ ಪಕ್ಷದ ರ‍್ಯಾಲಿ ಬಳಿಕ ಮೋದಿ ಅವರು ಸಂದೇಶ್‌ಖಾಲಿಯಿಂದ ಬಂದಿದ್ದ ಮಹಿಳೆಯರನ್ನು ಭೇಟಿ ಮಾಡಿದರು.’ ಎಂದು ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಗ್ನಿಮಿತ್ರ ಪೌಲ್‌ ತಿಳಿಸಿದ್ದಾರೆ. ಪ್ರಧಾನಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್‌ಖಾಲಿಯಿಂದ ಬಂದಿದ್ದ ಮಹಿಳೆಯೊಬ್ಬರು ‘ಪ್ರಧಾನಿ ಮಂತ್ರಿ ನಮ್ಮ ಮಾತುಗಳನ್ನು ಸಮಾಧಾನದಿಂದ ಆಲಿಸಿದರು. ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದೆವು’ ಎಂದು ತಿಳಿಸಿದರು. ‘ರಾಜ್ಯ ಸರ್ಕಾರದ ಮೇಲೆ ನಮಗೆ ವಿಶ್ವಾಸ ಇಲ್ಲ. ಹೀಗಾಗಿ ನಮಗೆ ನ್ಯಾಯ ಸಿಗುವುದನ್ನು ಖಾತ್ರಿಪಡಿಸುವಂತೆ ಕೋರಿದೆವು’ ಎಂದೂ ಮಹಿಳೆ ತಿಳಿಸಿದರು. ಪ್ರಧಾನಿ ಭೇಟಿಗೆ ತೆರಳುತ್ತಿದ್ದ ಮಹಿಳೆಯರಿದ್ದ ಬಸ್‌ಗಳಿಗೆ ತಡೆ ಕೋಲ್ಕತ್ತ: 24 ಉತ್ತರ ಪರಗಣ ಜಿಲ್ಲೆಯ ಬಾರಾಸತ್‌ನಲ್ಲಿ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗೆ ತೆರಳುತ್ತಿದ್ದ ಸಂದೇಶ್‌ಖಾಲಿಯ ಮಹಿಳೆಯರಿದ್ದ ಕೆಲ ಬಸ್‌ಗಳನ್ನು ‘ಭದ್ರತೆ ಶಿಷ್ಟಾಚಾರ’ ಕಾರಣ ನೀಡಿ ಪೊಲೀಸರು ಹಲವೆಡೆ ತಡೆದರು. ತಡೆದು ನಿಲ್ಲಿಸಲಾದ ಬಸ್‌ಗಳಿಂದ ಇಳಿದ 30 ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಈ ಮಾರ್ಗದಲ್ಲಿ ಪ್ರಧಾನಿಯವ ಬೆಂಗಾವಲು ವಾಹನಗಳು ಸಾಗುತ್ತಿರುವ ಕಾರಣ ವಾಹನಗಳ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು. ‘ಬಸ್‌ಗಳನ್ನು ಮೊದಲು ನ್ಯೂಟೌನ್‌ನ ವಿಶ್ವಬಾಂಗ್ಲಾ ಗೇಟ್‌ ಬಳಿ ತಡೆಯಲಾಯಿತು. ನಂತರ ಬಾರಾಸತ್‌ಗೆ ತೆರಳುವ ಮಾರ್ಗದಲ್ಲಿ ಏರ್‌ಪೋರ್ಟ್‌ನ ಗೇಟ್‌ ನಂ.1ರ ಬಳಿ ತಡೆಯಲಾಯಿತು. ಉಳಿದ ಬಸ್‌ಗಳ ಸಂಚಾರಕ್ಕೆ ತಡೆ ಒಡ್ಡದ ಪೊಲೀಸರು ಭದ್ರತೆ ಕಾರಣ ನೀಡಿ ಸಂದೇಶ್‌ಖಾಲಿಯ ಮಹಿಳೆಯರಿದ್ದ ಬಸ್‌ಗಳನ್ನು ಮಾತ್ರ ತಡೆದರು’ ಎಂದು ಬಸ್‌ವೊಂದರಲ್ಲಿ ಬಿಜೆಪಿ ನಾಯಕರೊಬ್ಬರು ಆರೋಪಿಸಿದ್ದಾರೆ. ಟಿಎಂಸಿಯಿಂದ ಅಮಾನತುಗೊಂಡಿರುವ ಮುಖಂಡ ಶಹಜಹಾನ್‌ ಹಾಗೂ ಅವರ ಬೆಂಬಲಿಗರಿಂದ ದೌರ್ಜನ್ಯಕ್ಕೆ ಒಳಗಾದ ಎನ್ನಲಾದ ಮಹಿಳೆಯರನ್ನು ರ‍್ಯಾಲಿ ಸ್ಥಳಕ್ಕೆ ಕರೆದೊಯ್ಯಲು ಬಿಜೆಪಿ ರಾಜ್ಯ ಘಟಕವು ಬಸ್‌ಗಳ ವ್ಯವಸ್ಥೆ ಮಾಡಿತ್ತು. ‘ಮಹಿಳೆಯರ ಸುರಕ್ಷತೆ ಕುರಿತು ಮಾತನಾಡಲು ಮೋದಿಗೆ ಹಕ್ಕಿಲ್ಲ’ ಕೋಲ್ಕತ್ತ: ‘ಬಿಜೆಪಿ ನಾಯಕರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಬ್ಬರಿಗೆ ಹೇಳುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೇ ಹಕ್ಕಿಲ್ಲ’ ಎಂದು ಟಿಎಂಸಿ ಬುಧವಾರ ಆರೋಪಿಸಿದೆ. ‘ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿ ದೇಶದಲ್ಲಿ ಪ್ರತಿ ಗಂಟೆಗೆ 51 ಪ್ರಕರಣಗಳು ದಾಖಲಾಗುತ್ತಿವೆ. ಇಂಥ ಪರಿಸ್ಥಿತಿ ಸುಧಾರಣೆಗೆ ಪ್ರಧಾನಿ ಏನು ಕ್ರಮ ಕೈಗೊಂಡಿದ್ದಾರೆ’ ಎಂದು ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಯಾನ್ ಪ್ರಶ್ನಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.