ಲೋಕಸಭೆ ಚುನಾವಣೆ: ದೆಹಲಿಯಲ್ಲಿ ಪ್ರಚಾರಕ್ಕಾಗಿ ಕಾಂಗ್ರೆಸ್-ಎಎಪಿ ಜಂಟಿ ಸಮಿತಿ ರಚನೆ ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಚಾರ ನಡೆಸಲು ಕಾಂಗ್ರೆಸ್‌ ಮತ್ತು ಎಎಪಿ ಪಕ್ಷಗಳು ಒಂದೆರೆಡು ದಿನಗಳಲ್ಲಿ ಜಂಟಿ ಸಮಿತಿ ರಚಿಸಲಿವೆ ಎಂದು ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ಹೇಳಿದ್ದಾರೆ. ‘ದೆಹಲಿ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸುಭಾಷ್‌ ಚೋಪ್ರಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುವುದು. ದೆಹಲಿಯ ಹಲವು ಮಾಜಿ ಮಂತ್ರಿಗಳು ಅದರ ಭಾಗವಾಗಲಿದ್ದಾರೆ. ಎರಡೂ ಪಕ್ಷಗಳ ಪ್ರಚಾರಗಳು ಹಾಗೂ ಸಾರ್ವಜನಿಕ ಸಭೆಗಳನ್ನು ಅವರು ಆಯೋಜಿಸುತ್ತಾರೆ’ ಎಂದು ಸುದ್ದಿಸಂಸ್ಥೆ ‍ಪಿಟಿಐಗೆ ಲವ್ಲಿ ತಿಳಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ರಚಿಸಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಮತ್ತು ಎಎಪಿ ಪ್ರಮುಖ ಪಕ್ಷಗಳಾಗಿವೆ. ದೆಹಲಿಯಲ್ಲಿ ಎಎಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್‌ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಮುಂಬರುವ ಚುನಾವಣೆಗೆ ಎಎಪಿ ಮತ್ತು ಕಾಂಗ್ರೆಸ್‌ ಒಟ್ಟಾಗಿ ಪ್ರಚಾರ ನಡೆಸಲಿವೆ ಎಂದು ಈ ಹಿಂದೆ ಎಎಪಿಯ ಹಿರಿಯ ನಾಯಕ ಸಂದೀಪ್‌ ಪಾಠಕ್‌ ಹೇಳಿದ್ದರು. ಕಾಂಗ್ರೆಸ್‌ನ ಹರೂನ್‌ ಯೂಸುಫ್‌, ರಾಜ್‌ ಕುಮಾರ್‌ ಚೌಹಾಣ್‌, ಮುಖೇಶ್‌ ಶರ್ಮಾ, ಜೈ ಕಿಶನ್‌ ಮತ್ತು ರಮೇಶ್‌ ಕುಮಾರ್‌ ಅವರಂತಹ ನಾಯಕರು ಸಮಿತಿಯ ಭಾಗವಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಅಭಿಯಾನದ ಕುರಿತು ಮಾತನಾಡಿದ ಲವ್ಲಿ, ‘ಪ್ರತಿ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಳ್ಳುವ ಮುಖ್ಯಸ್ಥರು ಜನರ ಸಮಸ್ಯೆಗಳನ್ನು ಗುರುತಿಸುತ್ತಾರೆ. ಸಾಮಾಜಿಕ ಮಾಧ್ಯಮ ಪ್ರಚಾರದ ಮೇಲೆ ನಿಗಾ ವಹಿಸಲು ದೆಹಲಿ ಕಾಂಗ್ರೆಸ್‌ ಕಚೇರಿಯಲ್ಲಿ ‘ವಾರ್‌ ರೂಮ್‌’ ಸ್ಥಾಪಿಸಲಾಗಿದೆ’ ಎಂದು ತಿಳಿಸಿದ್ದಾರೆ. ‘ನಾವು 150ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಹೊಂದಿದ್ದೇವೆ. ಅವರು ಇದಕ್ಕಾಗಿ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸುತ್ತಾರೆ. ಸಾಮಾಜಿಕ ಮಾಧ್ಯಮ ಪ್ರಚಾರಕ್ಕಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳು, ಬ್ಲಾಕ್‌ಗಳು ಮತ್ತು ಜಿಲ್ಲೆಗಳಲ್ಲಿ ತಲಾ ಒಬ್ಬ ಅಧ್ಯಕ್ಷರನ್ನು ನೇಮಿಸಲಾಗುತ್ತದೆ’ ಎಂದು ಲವ್ಲಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.